ADVERTISEMENT

ಮಡಿಕೇರಿ: ನಗರದಲ್ಲಿ ಪರಿಸರ ಸಂರಕ್ಷಣೆ ಮ್ಯಾರಥಾನ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 13:41 IST
Last Updated 12 ಫೆಬ್ರುವರಿ 2020, 13:41 IST
ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ವೃತ್ತದಿಂದ ಪರಿಸರ ಸಂರಕ್ಷಣೆಯ ಮ್ಯಾರಥಾನ್‌ ಆರಂಭಗೊಂಡಿತು
ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ವೃತ್ತದಿಂದ ಪರಿಸರ ಸಂರಕ್ಷಣೆಯ ಮ್ಯಾರಥಾನ್‌ ಆರಂಭಗೊಂಡಿತು   

ಮಡಿಕೇರಿ: ಸಮೀಪದ ಇಬ್ಬನಿ ಕೂರ್ಗ್ ರೆಸಾರ್ಟ್‌ ವತಿಯಿಂದ ಆಯೋಜಿಸಿದ್ದ ಹಸಿರು ಸಂರಕ್ಷಣೆ ಸಂದೇಶದ ಮ್ಯಾರಾಥಾನ್‌ಗೆ ಇಲ್ಲಿನ ಫೀಲ್ಡ್ ಮಾರ್ಷಲ್‌ ಕಾರ್ಯಪ್ಪ ವೃತ್ತದಲ್ಲಿ ಬುಧವಾರ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಚಾಲನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್, ವಕೀಲ ಎಂ.ಎ.ನಿರಂಜನ್, ಹೋಮ್‌ ಸ್ಟೇ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ, ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ‘ಗ್ರೀನ್ ಸಿಟಿ ಫೋರಂ’ ಸಂಚಾಲಕ ಚೆಯ್ಯಂಡ ಸತ್ಯ, ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ., ವಕೀಲರ ಸಂಘದ ಅಧ್ಯಕ್ಷ ಕವನ್, ಉದ್ಯೋಗ ವಿನಿಮಯ ಅಧಿಕಾರಿ ಕೆ.ವಿ.ಜಗನ್ನಾಥ್, ಡಿವೈಎಸ್‌ಪಿ ದಿನೇಶ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪ್ರವಾಸೋದ್ಯಮಿ ವಿಕಾಸ್ ಅಚ್ಚಯ್ಯ ಪಾಲ್ಗೊಂಡಿದ್ದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಸಿರು ಸಂರಕ್ಷಣೆ ಸಂದೇಶ ಹೊಂದಿದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.

ADVERTISEMENT

ಬಳಿಕ ಇಬ್ಬನಿ ರೆಸಾರ್ಟ್‌ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಡಿವೈಎಸ್‌ಪಿ ಬಾರಿಕೆ ದಿನೇಶ್‌ಕುಮಾರ್‌ ಮಾತನಾಡಿ, ‘ಇನ್ನಾದರೂ ನಿಸರ್ಗ ಸಂರಕ್ಷಣೆಯ ಕಾಯ೯ಕ್ರಮಗಳು ಕೊಡಗಿನಲ್ಲಿ ಹೆಚ್ಚುಹೆಚ್ಚಾಗಿ ನಡೆಯಬೇಕು’ ಎಂದು ಕರೆ ನೀಡಿದರು.

‘ಪರಿಸರ ರಕ್ಷಣೆಯ ಜಾಗೃತಿ ಮ್ಯಾರಥಾನ್ ಮಕ್ಕಳ ಮನಸ್ಸಿಗೆ ಹೆಚ್ಚು ನಾಟುವಂತಹ ಕಾಯ೯ಕ್ರಮ’ ಎಂದು ಶ್ಲಾಘಿಸಿದರು.

ಹಿರಿಯ ವಕೀಲ ಎಂ.ಎ.ನಿರಂಜನ್ ಮಾತನಾಡಿ, ‘ನಾವು ನಿಸಗ೯ದ ಮೇಲೆ ನಡೆಸಿದ ದೌಜ೯ನ್ಯಕ್ಕೆ ಪ್ರತಿಫಲ ಎಂಬಂತೆ ಪ್ರಕೃತಿಯು ಇದೀಗ ಮಾನವನಿಗೆ ತಿರುಗೇಟು ನೀಡುತ್ತಿದ್ದು, ನಾವು ನಿಸಗ೯ದ ಅಧಿಪತಿಗಳಲ್ಲ ಎಂಬುದನ್ನು ಇನ್ನಾದರೂ ತಿಳಿದುಕೊಳ್ಳಬೇಕಾಗಿದೆ’ ಎಂದು ಎಚ್ಚರಿಕೆ ನೀಡಿದರು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕವನ್ ಮಾತನಾಡಿ, ‘ಮಕ್ಕಳು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ಇಬ್ಬನಿ ಕೂರ್ಗ್ ರೆಸಾರ್ಟ್‌ ಮಾಲೀಕ ಕ್ಯಾಪ್ಟನ್ ಸೆಬಾಸ್ಟಿನ್ ಮಾತನಾಡಿ, ‘ಸ್ವಚ್ಛ, ಹಸಿರು ಪರಿಸರ ತಮ್ಮ ರೆಸಾರ್ಟ್‌ನ ಧ್ಯೇಯವಾಕ್ಯ. ಭೂದೇವಿಯ ಒಡಲನ್ನು ಹಾಳುಗೆಡವಲು ಬಿಡಬಾರದು ಎಂಬ ದೃಷ್ಟಿಯಿಂದ ತಮ್ಮ ರೆಸಾರ್ಟ್‌ ಅನ್ನು ಮಾಲಿನ್ಯಕ್ಕೆ ಆಸ್ಪದ ಕೊಡದಂತೆ ಸಂರಕ್ಷಿಸಲಾಗಿದೆ’ ಎಂದು ಹೇಳಿದರು.

ಆಹಾರವನ್ನೂ ಕೂಡ ರೆಸಾರ್ಟ್‌ನಲ್ಲಿ ವ್ಯರ್ಥವಾಗದಂತೆ ಪ್ರವಾಸಿಗರಿಗೆ ತಿಳಿಹೇಳುತ್ತಿದ್ದು ರೆಸಾರ್ಟ್‌ಗೆ ಬರುವವರು ಅನಗತ್ಯವಾದ ಆಹಾರವನ್ನು ವ್ಯರ್ಥ ಮಾಡಿದರೆ ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದರು. ಕಾಯ೯ನಿವಾ೯ಹಕ ಮುಖ್ಯಸ್ಥೆ ಶರಿ ಸೆಬಾಸ್ಟಿನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.