ADVERTISEMENT

ಆಹಾ.. ಬೆಳ್ದೊರೆ ಮೇದುರ

ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ ಸಮೀಪದ ಇದೆ ಅಪರೂಪದ ಜಲರಾಶಿ

ಡಿ.ಪಿ.ಲೋಕೇಶ್
Published 14 ಜುಲೈ 2024, 7:21 IST
Last Updated 14 ಜುಲೈ 2024, 7:21 IST
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಪಂಚಾಯಿತಿ ವ್ಯಾಪ್ತಿಯ ಮೇದುರ ಜಲಪಾತ ಭೋರ್ಗರೆಯುತ ಹರಿಯುತ್ತಿದೆ
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಪಂಚಾಯಿತಿ ವ್ಯಾಪ್ತಿಯ ಮೇದುರ ಜಲಪಾತ ಭೋರ್ಗರೆಯುತ ಹರಿಯುತ್ತಿದೆ   

ಸೋಮವಾರಪೇಟೆ: ಕಣ್ಣು ಹಾಯಿಸಿದಷ್ಟು ದೂರ ಹಸಿರ ರಾಶಿ, ಸುತ್ತಲೂ ಅಲ್ಲಲ್ಲಿ ಕಾಣಿಸಿಗುವ ಗುಡ್ಡಗಳು, ನಡುವೆ ಬಂಡೆಗಲ್ಲುಗಳ ಮೇಲಿಂದ ಧುಮ್ಮಿಕ್ಕುವ ಜಲರಾಶಿ ನೋಡಲು ಎರಡು ಕಣ್ಣುಗಳೇ ಸಾಲವು.

ಇದು ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ ಮೇದುರ ಜಲಪಾತದ ಸೊಬಗು.

ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಗುಡ್ಡವೊಂದರ ಮೇಲಿಂದ ಹರಿಯುವ ಈ ಜಲಧಾರೆಗೆ ಮನಸೋಲದವರೇ ಇರಲ್ಲ. ಸುಮಾರು 100 ಮೀಟರ್‌ಗಿಂತಲೂ ಅಧಿಕ ಎತ್ತರದಿಂದ ಧುಮ್ಮಿಕ್ಕಿ ಹರಿದು ಸಾಗುವ ಈ ಜಲಪಾತ ಹೆಚ್ಚು ಪ್ರಸಿದ್ಧಿ ಪಡೆದಿಲ್ಲ.

ADVERTISEMENT

ಮುಂಗಾರು ಮಳೆ ಪ್ರಾರಂಭವಾದ ತಕ್ಷಣವೇ ಮಲೆನಾಡಿನಲ್ಲಿ ಅದೆಷ್ಟೊ ಜಲಪಾತಗಳು ಮೈದೆಳೆದು, ಮಳೆಗಾಲ ಮುಗಿಯುತ್ತಿರುವಂತೆಯೇ ಕಣ್ಮರೆಯಾಗುವುದನ್ನು ನಾವು ನೋಡಬಹುದು. ಅವುಗಳ ಸಾಲಿನಲ್ಲಿ ಈ ಜಲಪಾತವೂ ಸೇರುತ್ತದೆ.

ಬೆಟ್ಟ ಗುಡ್ಡಗಳಿಂದ ಹಾಲ್ನೊರೆಯಂತೆ ಜಾರುವ ನೀರಿನ ರಾಶಿಯನ್ನು ನೋಡುವುದೇ ಅಂದ. ಕೆಲವು ನಿಶಬ್ಧವಾಗಿ ದುಮ್ಮಿಕ್ಕಿದರೆ, ಇನ್ನೂ ಕೆಲವು ನಾಲ್ಕಾರು ಕಿಲೋ ಮೀಟರ್ ದೂರಕ್ಕೆ ಕೇಳುವ ಹಾಗೆ ಭೋರ್ಗರೆಯುತ್ತಾ ಇರುತ್ತವೆ. ಗ್ರಾಮೀಣ ಭಾಗದ ಪಶ್ಚಿಮ ಘಟ್ಟ ಶ್ರೇಣಿಯ ಯಾವುದೇ ಭಾಗಗಳಲ್ಲಿ ಮಳೆಗಾಲದ ಸಮಯದಲ್ಲಿ ಸಂಚರಿಸಿದರೆ ಜಲಪಾತಗಳು ಯಾವುದೇ ಕಾರಣಕ್ಕೂ ನೋಡುಗರಿಗೆ ನಿರಾಸೆ ಮಾಡುವುದಿಲ್ಲ. ಬೆಟ್ಟಗುಡ್ಡಗಳಲ್ಲಿ ದೊಡ್ಡ ಜಲಪಾತಗಳಿದ್ದರೆ, ಗುಡ್ಡಗಳಲ್ಲಿನ ತೋಟಗಳಲ್ಲಿ ಅಸಂಖ್ಯಾತ ಚಿಕ್ಕ ಪುಟ್ಟ ಜಲಪಾತಗಳನ್ನೂ ಕಾಣಬಹುದು.

ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಇನ್ನಿಲ್ಲದಂತೆ ಸುರಿಯುತ್ತಿದೆ. ಸೂರ್ಲಬ್ಬಿ ಗ್ರಾಮದ ಮೇದುರ ಜಲಪಾತ ನೂರಾರು ಮೀಟರ್ ಎತ್ತರದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ದೃಶ್ಯ ಈಗ ನೋಡುಗರ ಮನ ಸೆಳೆಯುತ್ತಿದೆ. ಈ ಜಲಪಾತ ರಸ್ತೆಯ ಬದಿಯಲ್ಲಿಯೇ ಇರುವುದರಿಂದ ವಾಹನಗಳನ್ನು ಜಲಪಾತದ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ನೋಡಬಹುದಾಗಿದೆ.

ಜಲಪಾತಕ್ಕೆ ಹೀಗೆ ಬನ್ನಿ

ಜಲಪಾತಕ್ಕೆ ಸೋಮವಾರಪೇಟೆಯಿಂದ ತಾಕೇರಿ ಮಾರ್ಗವಾಗಿ ಗರ್ವಾಲೆ ಮೂಲಕ ತೆರಳಬಹುದು. ಸುಮಾರು 26 ಕಿಲೋ ಮೀಟರ್ ದೂರವಾಗುತ್ತದೆ. ಮಡಿಕೇರಿ ಕಡೆಯಿಂದ ಬಂದು ಮಾದಾಪುರದ ರಸ್ತೆಯ ಮೂಲಕ ಶಾಂತಳ್ಳಿ ರಸ್ತೆಯಲ್ಲಿಯೂ ಸೂರ್ಲಬ್ಬಿ ಗ್ರಾಮಕ್ಕೆ ತೆರಳಲು ರಸ್ತೆ ವ್ಯವಸ್ಥೆ ಇದೆ. ಈ ಭಾಗದಲ್ಲಿ ಕೆಲವು ಹೋಮ್ ಸ್ಟೇ ಹಾಗೂ ರೆಸಾರ್ಟ್‍ಗಳಿರುವುದರಿಂದ ಊಟಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಪಂಚಾಯಿತಿ ವ್ಯಾಪ್ತಿಯ ಮೇದುರ ಜಲಪಾತದ ನೀರು ಭೋರ್ಗರೆಯುತ ಹರಿಯುತ್ತಿದೆ

ನೋಡುಗರ ಕಣ್ಮನ ಸೆಳೆಯುತ್ತಿದೆ ಈ ಜಲಪಾತ 100 ಮೀಟರ್‌ಗಿಂತಲೂ ಮೇಲಿನಿಂದ ಧುಮ್ಮಿಕ್ಕುತ್ತಿದೆ ಜಲಧಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.