ADVERTISEMENT

1.8 ತೀವ್ರತೆಯ ಭೂಕಂಪನ; ಕೊಡಗಿನಲ್ಲಿ ಕೇಂದ್ರ ಬಿಂದು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 4:36 IST
Last Updated 1 ಜುಲೈ 2022, 4:36 IST
   

ಮಡಿಕೇರಿ: ಕೊಡಗು ಜಿಲ್ಲೆಯ ಕೆಲವೆಡೆ ಶುಕ್ರವಾರ ನಸುಕಿನಲ್ಲಿ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ಮಡಿಕೇರಿ ತಾಲ್ಲೂಕಿನಲ್ಲಿ ಪತ್ತೆಯಾಗಿದೆ. ರಿಕ್ಟರ್ ಮಾಪಕದಲ್ಲಿ 1.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ದೃಢಪಡಿಸಿದೆ.

ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಿಂದ ವಾಯುವ್ಯ ದಿಕ್ಕಿನಲ್ಲಿ 5.2 ಕಿ.ಮೀ ದೂರದಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ ನಸುಕಿನ 1.15ರಲ್ಲಿ‌ ಭೂಕಂಪ ಸಂಭವಿಸಿದೆ. ಇದರಿಂದ ಕೆಲವು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವ ಸುಮಾರು 30 ಕಿ.ಮೀ ವ್ಯಾಪ್ತಿಯಲ್ಲಿರುವ ಜನರಿಗೆ ಉಂಟಾಗಿದೆ. ಯಾವುದೇ ಹಾನಿಯಾಗಿಲ್ಲ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.

ಭೂಮಿಯಲ್ಲಿ ಬಿರುಕುಗಳು ಕಂಡು ಬಂದ ಕೂಡಲೇ 08272-221077, 221099 ಕ್ಕೆ ಕರೆ ಮಾಡಿ ಮಾಹಿತಿ ನೀಡಿ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ಮನವಿ ಮಾಡಿದೆ.

ADVERTISEMENT

ಭೂಮಿ ಕಂಪಿಸುವುದರೊಂದಿಗೆ ಭಾರಿ ಪ್ರಮಾಣದ ವಿಚಿತ್ರವಾದ ಶಬ್ದ ಭೂಮಿ‌ ಕೇಳಿ ಬಂದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

2018ರಲ್ಲೂ ಭೂಕಂಪ ಸಂಭವಿಸಿದ ಬಳಿಕ ಸುರಿದ ಭಾರಿ ಮಳೆಯಲ್ಲಿ ಭೂಕುಸಿತಗಳು ಸಂಭವಿಸಿದ್ದವು. ಪದೇ ಪದೇ ಈ ಭಾಗದಲ್ಲಿ ಭೂಕಂಪ‌‌ ಆಗುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.