ADVERTISEMENT

ಗೋಣಿಕೊಪ್ಪಲು: ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸಜ್ಜು

ಪೊನ್ನಂಪೇಟೆ ಆಹಾರ ದಾಸ್ತಾನು, ಮೀಟರ್ ಘಟಕ ಕಟ್ಟಡ ನೆಲಸಮ

ಜೆ.ಸೋಮಣ್ಣ
Published 6 ಅಕ್ಟೋಬರ್ 2025, 5:42 IST
Last Updated 6 ಅಕ್ಟೋಬರ್ 2025, 5:42 IST
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆಯ ಆಹಾರ ದಾಸ್ತಾನು ಹಾಗೂ ಕೊಡಗು ಮೀಟರ್ ಘಟಕ ಕಟ್ಟಡ ನೆಲಸಮ ಮಾಡಲಾಗಿದೆ
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆಯ ಆಹಾರ ದಾಸ್ತಾನು ಹಾಗೂ ಕೊಡಗು ಮೀಟರ್ ಘಟಕ ಕಟ್ಟಡ ನೆಲಸಮ ಮಾಡಲಾಗಿದೆ   

ಗೋಣಿಕೊಪ್ಪಲು: ಆಹಾರ ದಾಸ್ತಾನು ಮತ್ತು ಕೊಡಗಿನ ಸಾವಿರಾರು ಮಹಿಳೆಯರ ಬದುಕು ಕಟ್ಟಿಕೊಳ್ಳಲು ಆಸರೆಯಾಗಿದ್ದ 65 ವರ್ಷಗಳಷ್ಟು ಹಳೆಯದಾದ ಪೊನ್ನಂಪೇಟೆಯ ಮೀಟರ್ ಬೋರ್ಡ್ ತಯಾರಿಕಾ ಕಟ್ಟಡ ಈಗ ನೆಲಸಮವಾಗಿದೆ. ಪೊನ್ನಂಪೇಟೆಯಲ್ಲಿ ನೂತನ ಮಿನಿ ವಿಧಾನ ಸೌಧ ಕಟ್ಟಡ ಕಟ್ಟಲು ಇದನ್ನು ಕೆಡವಲಾಗಿದೆ.

ಗೋಣಿಕೊಪ್ಪಲು ಮಾರ್ಗದ ಪೊನ್ನಂಪೇಟೆ ಹೆಬ್ಬಾಗಿಲಿನಲ್ಲಿದ್ದ ಈ ಕಟ್ಟಡವನ್ನು 1960ರಲ್ಲಿ ನಿರ್ಮಿಸಲಾಗಿತ್ತು. ಅಂದು ಪೊನ್ನಂಪೇಟೆ, ಗೋಣಿಕೊಪ್ಪಲು ಸುತ್ತಮುತ್ತ ಹತ್ತಾರು ಬೃಹತ್ ಅಕ್ಕಿಗಿರಣಿಗಳಿದ್ದವು. ಅವುಗಳಿಂದ ಬಂದ ಅಕ್ಕಿ ಮತ್ತು ಇತರ ಆಹಾರ ಸಾಮಾಗ್ರಿಗಳನ್ನು ಆಹಾರ ಇಲಾಖೆಯವರು ಇಲ್ಲಿ ದಾಸ್ತಾನು ಮಾಡುತ್ತಿದ್ದರು. ಹೀಗಾಗಿ ಇದನ್ನು ಆಹಾರ ಸಾಮಗ್ರಿ ಗೋಡಾನ್ ಎಂದೂ ಕರೆಯಲಾಗುತ್ತಿತ್ತು.

ಆಹಾರ ದಾಸ್ತಾನು ಮಾಡುವುದಕ್ಕಾಗಿಯೇ ಒಂದುವರೆ ಎಕರೆ ಪ್ರದೇಶದಲ್ಲಿ ಕಬ್ಬಿಣದ ಕಂಬಿ ಹಾಕಿ ಸಿಮೆಂಟ್‌ಗಳಿಂದ ಕೂಡಿದ ಕಂಬ ಹಾಗೂ ಕಲ್ಲಿನ ಗೋಡೆ ನಿರ್ಮಾಣ ಮಾಡಲಾಗಿತ್ತು. ಮುಂದೆ ಬದಲಾದ ಸನ್ನಿವೇಶದಲ್ಲಿ ಈ ಗೋದಾಮಿನಲ್ಲಿ ಆಹಾರ ಸಾಮಗ್ರಿಗಳ ದಾಸ್ತಾನು ಕುಂಠಿದ್ದರಿಂದ ಇದಕ್ಕೆ ಬೀಗ ಮುದ್ರೆ ಬಿದ್ದಿತು. 1980ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಆರ್.ಗುಂಡುರಾವ್ ಅವರು ಸ್ಥಳೀಯರ ಮನವಿ ಮೇರೆಗೆ ಮಹಿಳೆಯರಿಗೆ ಸಹಾಯವಾಗಲೆಂದು ವಿದ್ಯುತ್ ಪರಿಕರದ ಮೀಟರ್ ಬೋರ್ಡ್ ಜೋಡಣೆ ಘಟಕವನ್ನು ಬಿಎಚ್‌ಇಎಲ್ ಸಹಭಾಗಿತ್ವದಲ್ಲಿ ಆರಂಭಿಸಿದರು. ಹೀಗಾಗಿ ಇದು ಕೊಡಗು ಮೀಟರ್ ಘಟಕವಾಗಿ ಬದಲಾಯಿತು.

ADVERTISEMENT

ಇಲ್ಲಿ 250ಕ್ಕೂ ಹೆಚ್ಚು ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದರು. ಎರಡು ದಶಕಗಳ ಕಾಲ ಕಾರ್ಯನಿರ್ವಹಿಸಿದ ಈ ಕೈಗಾರಿಕಾ ಘಟಕ ರಾಜ್ಯದ ಎಲ್ಲ ಭಾಗಗಳಿಗೂ ಮೀಟರ್ ಪರಿಕರ ಒದಗಿಸುತ್ತಿತ್ತು. ಇದರಿಂದ ನೂರಾರು ಕುಟುಂಬಗಳ ಜೀವನದ ಭದ್ರತೆಗೂ ದಾರಿಯಾಗಿತ್ತು.

ಮುಂದೆ ನೂತನ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ 1999ರಲ್ಲಿ ಘಟಕವನ್ನು ಮುಚ್ಚಲಾಯಿತು. ಇಲ್ಲಿದ್ದ ಉದ್ಯೋಗಿಗಳು ಬೀದಿಪಾಲಾದರು. ಬದುಕಿಗಾಗಿ ಭದ್ರತೆ ಒದಗಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಲೇರಿ ಇಂದಿಗೂ ಕೂಡ ವ್ಯಾಜ್ಯ ನಡೆಯುತ್ತಿದೆ.

ಈ ವೇಳೆಯಲ್ಲಿ ಇಲ್ಲಿನ ಕೆಲವು ಮಹಿಳೆಯರನ್ನು ಗೋಣಿಕೊಪ್ಪಲು ಕಿತ್ತಳೆ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್ ಅರುಣ್ ಮಾಚಯ್ಯ ಕೆಲಸಕ್ಕೆ ನೇಮಿಸಿಕೊಂಡರು.

2018ರಲ್ಲಿ ಪೊನ್ನಂಪೇಟೆ ತಾಲ್ಲೂಕು ಘೋಷಣೆಯಾದಾಗ ಇದನ್ನು ತಾತ್ಕಾಲಿಕವಾಗಿ ತಾಲ್ಲೂಕು ಕಚೇರಿಯಾಗಿ ಪರಿವರ್ತಿಸಲಾಯಿತು. ಮೂರು ವರ್ಷಗಳ ಕಾಲ ತಾಲ್ಲೂಕು ಕಚೇರಿಯ ಕಡತಗಳನ್ನು ಭದ್ರವಾಗಿ ತನ್ನೊಳಗೆ ಇರಿಸಿಕೊಂಡಿದ್ದ ಈ ಕಟ್ಟಡ ಇದೀಗ ನೆಲಸಮ ವಾಗುತ್ತಿರುವುದನ್ನು ಕಂಡು ಸ್ಥಳೀಯರು ಮರುಕಪಡುತ್ತಿದ್ದಾರೆ. 

60 ವರ್ಷ ಕಳೆದರೂ ಒಂದಿಷ್ಟೂ ಬಿರುಕಿಲ್ಲದ ಗೋಡೆಯನ್ನು ಕೆಡವಲು ಗುತ್ತಿಗೆದಾರ ಹರಸಾಹಸ ಪಡುತ್ತಿದ್ದಾರೆ. ಜೆಸಿಬಿ ಮೂಲಕ ಕೆಡುವುತ್ತಿದ್ದು ಕಂಬಗಳಿಗೆ ಹಾಕಿರುವ ಕಬ್ಬಿಣಗಳು ಈಗಲೂ ಉತ್ತಮ ಗುಣಮಟ್ಟದಿಂದ ಕೂಡಿದೆ. ₹ 8 ಲಕ್ಷ ರೂಪಾಯಿಗೆ ಇದನ್ನು ಕೆಡವಿ ಅದರ ಸಾಮಾಗ್ರಿಗಳನ್ನು ಪಡೆದುಕೊಳ್ಳುವಂತೆ ಗುತ್ತಿಗೆದಾರರಿಗೆ ಆದೇಶ ನೀಡಲಾಗಿದೆ. ಕಟ್ಟಡದ ಕೊನೆಯ ಎರಡು ಕೊಠಡಿಗಳನ್ನು ಉಳಿಸಿಕೊಂಡಿದ್ದು ಕೆಲವು ಸಾಮಗ್ರಿಗಳನ್ನು ಶೇಖರಿಸಿಡಲಾಗಿದೆ.

ಹಳೆಯ ಕಟ್ಟಡವನ್ನು ಉಳಿಸಬಹುದಿತ್ತು; ನೂರಾರು ವರ್ಷ ಕಳೆದರೂ ಈ ಕಟ್ಟಡ ಅಲುಗಾಡುತ್ತಿರಲಿಲ್ಲ. ಅಷೊಂದು ಸುಭದ್ರವಾಗಿತ್ತು. ಈ ಕಟ್ಟಡದ ಮೇಲೆಯೇ ನೂತನ ತಾಲ್ಲೂಕು ಕಚೇರಿ ನಿರ್ಮಿಸ ಬಹುದಿತ್ತು ಎಂಬುದು ಪೊನ್ನಂಪೇಟೆಯ ಹಲವು ಹಿರಿಯರ ಆಕ್ಷೇಪ.

ರೂಪುರೇಷೆ ಒಂದೇ ರೀತಿಯಾಗಿರಬೇಕು; ಆದರೆ ಈ ಬಗ್ಗೆ ಶಾಸಕ ಪೊನ್ನಣ್ಣ ಅವರನ್ನು ಸಂಪರ್ಕಿಸಿದಾಗ, ಈ ಕುರಿತು ಸರ್ಕಾರದೊಂದಿಗೂ ಮಾತು ಕತೆ ನಡೆಸಲಾಗಿದೆ. ಆದರೆ ಇಡೀ ರಾಜ್ಯದಾದ್ಯಂತ ಮಿನಿ ವಿಧಾನಸೌಧದ ರೂಪುರೇಷೆ ಒಂದೇ ಬಗೆಯದಾಗಿರಬೇಕು ಎಂಬುದು ಸರ್ಕಾರದ ನಿಯಮವಾಗಿದೆ. ಹೀಗಾಗಿ ಹಳೆಯ ಕಟ್ಟಡವನ್ನು ಅನಿವಾರ್ಯವಾಗಿ ಕೆಡವಲಾಯಿತು ಎಂದು ಹೇಳಿದರು.

ಜನತೆಗೆ ಅನುಕೂಲ; ಪೊನ್ನಂಪೇಟೆ ತಾಲ್ಲೂಕು ಘೋಷಣೆಯಾಗಿ 7 ವರ್ಷ ಕಳೆದರೂ ತನ್ನದೇ ಕಟ್ಟಡ ಇರಲಿಲ್ಲ. ಈ ಕೊರತೆಯನ್ನು ಶಾಸಕ ಪೊನ್ನಣ್ಣ ಅವರು ಹೆಚ್ಚಿನ ಮುತುರ್ವಜಿ ವಹಿಸಿ ನೀಗಿಸುತ್ತಿರುವುದು ಅಭಿನಂದನಾರ್ಹ. ಅಂದಾಜು ₹ 8.60 ಕೋಟಿ ವೆಚ್ಚದಲ್ಲಿ ಪೊನ್ನಂಪೇಟೆ ಹೆಬ್ಬಾಗಿಲಿನಲ್ಲಿ ನಿರ್ಮಾಣಗಳ್ಳಲಿರುವ ಮಿನಿ ವಿಧಾನ ಸೌಧದಿಂದ ನಗರಕ್ಕೆ ಹೊಸ ಕಳೆಬರುವುದಲ್ಲದೆ ಅಲ್ಲದೆ ದಕ್ಷಿಣ ಕೊಡಗಿನ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ಪೊನ್ನಂಪೇಟೆಯ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಎಸ್.ಕುಶಾಲಪ್ಪ.

ಉಳಿದಿರುವ ಕಟ್ಟಡ ಸ್ವಲ್ಪಭಾಗ
ಕಲ್ಲು ಗೋಡೆಗಳಿಂದ ಕೂಡಿದ್ದ ಹಳೆಯ ಕಟಡ
ಕಟ್ಟಡದ ಗೋಡೆಯಲ್ಲಿದ್ದ ಸೈಜುಗಲ್ಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.