ADVERTISEMENT

ಮಹಿಳೆ ಜೊತೆ ಅನುಚಿತ ವರ್ತನೆ, ಕೊಲೆ: ನಾಲ್ವರ ಬಂಧನ

‘ಬೇಡ್ ನಮ್ಮೆ’ ವೇಳೆ ವಿವಿಧ ವೇಷ ಧರಿಸಿದ್ದ ಯುವಕರ ಜಗಳ

​ಪ್ರಜಾವಾಣಿ ವಾರ್ತೆ
Published 28 ಮೇ 2024, 5:26 IST
Last Updated 28 ಮೇ 2024, 5:26 IST

ವಿರಾಜಪೇಟೆ: ಬೇಡ್ ನಮ್ಮೆ ಹಬ್ಬ ಸಂದರ್ಭ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದನೆಂಬ ಕಾರಣಕ್ಕೆ ಪಟ್ಟಣದ ಬಳಿಯ ಲೈನ್ ಮನೆ ನಿವಾಸಿಯನ್ನು ಆತನ ಸಂಬಂಧಿಕರೇ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಾಲಂಗಾಲ ಸಮೀಪದ ಲೈನ್‌ಮನೆ ನಿವಾಸಿ ಜೇನುಕುರುಬರ ರಮೇಶ್ ಕೊಲೆಯಾದ ವ್ಯಕ್ತಿ. ಈತನನ್ನು ಮೂಲತಃ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕು ಬಾವಲಿ ನಿವಾಸಿಗಳಾದ ಜೇನುಕುರುಬರ ಲೋಕೇಶ, ಕೃಷ್ಣ, ಕುಟ್ಟದ ನಾತಂಗಾಲ ಗ್ರಾಮದ ಹರೀಶ ಹಾಗೂ ಕಾನೂನಿನ ಜೊತೆಗೆ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಮೇ 24ರಂದು ಕೊಲೆ ಮಾಡಿದ್ದರು. 

ರಮೇಶನ ಶವ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ದೊರೆತಿತ್ತು. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಸಂದರ್ಭ ರಮೇಶನ ಜೊತೆ ಮೇ 23ರಂದು ಆರೋಪಿಗಳು ಬೇಡ್ ನಮ್ಮೆ ಹಬ್ಬದಂದು ವಿವಿಧ ವೇಷ ಧರಿಸಿ ನರ್ತಿಸಿದ್ದರು. ಈ ವೇಳೆ ಆರೋಪಿಗಳ ಸಂಬಂಧಿ ಮಹಿಳೆ ಜೊತೆ ಮೃತ ರಮೇಶ ಅನುಚಿತ ವರ್ತನೆ ತೋರಿದ್ದ ಎನ್ನಲಾಗಿದೆ. ಈ ವಿಷಯವಾಗಿ ಜಗಳ ನಡೆದು, ರಾತ್ರಿ ನಾಲ್ಕು ಮಂದಿ ಸೇರಿ ರಮೇಶನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ರಕ್ತಸ್ರಾವವಾಗಿ ಆತ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ಸಂಬಂಧ ಮೃತನ ಪತ್ನಿ ಭವಾನಿ ಪೊಲೀಸರಿಗೆ ದೂರು ನೀಡಿದ್ದರು. ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಕಾನೂನಿನ ಜತೆಗೆ ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಾಲಮಂದಿರಕ್ಕೆ ಒಪ್ಪಿಸಿ ಕಾನೂನಿನಂತೆ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.