ADVERTISEMENT

‘ಆಧುನಿಕ ಜೀವನ ಶೈಲಿಗೆ ನೈಸರ್ಗಿಕ ಸಂಪತ್ತು ದುರ್ಬಳಕೆ’

ಕುಶಾಲನಗರ: ಕೊಡಗು ವಿವಿಯಲ್ಲಿ ಜೀವವೈವಿಧ್ಯ ಸಂರಕ್ಷಣೆಯ ರಾಷ್ಟ್ರೀಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:00 IST
Last Updated 28 ಅಕ್ಟೋಬರ್ 2025, 5:00 IST
ಕುಶಾಲನಗರ ಸಮೀಪದ ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಹಸಿರು ಸಂರಕ್ಷಣೆಯಲ್ಲಿ ಕೊಡಗಿನ ಜೀವವೈವಿಧ್ಯ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷ ಬಿ.ಆರ್. ಶಂಕರಾನಂದ ಉದ್ಘಾಟಿಸಿದರು
ಕುಶಾಲನಗರ ಸಮೀಪದ ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಹಸಿರು ಸಂರಕ್ಷಣೆಯಲ್ಲಿ ಕೊಡಗಿನ ಜೀವವೈವಿಧ್ಯ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷ ಬಿ.ಆರ್. ಶಂಕರಾನಂದ ಉದ್ಘಾಟಿಸಿದರು   

ಕುಶಾಲನಗರ: ನೈಸರ್ಗಿಕ ಜಗತ್ತನ್ನು ಸಮತೋಲನಕ್ಕೆ ವೈವಿಧ್ಯಮಯ ಪ್ರಭೇದಗಳು ಬೇಕಾಗುತ್ತವೆ. ಆದ್ದರಿಂದ ಜೀವ ವೈವಿಧ್ಯತೆ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದು ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷ ಬಿ.ಆರ್. ಶಂಕರಾನಂದ ಹೇಳಿದರು.

ಕೊಡಗು ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಸಿರು ಸಂರಕ್ಷಣೆಯಲ್ಲಿ ಕೊಡಗಿನ ಜೀವವೈವಿಧ್ಯ ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ಆಧುನಿಕ ಜೀವನ ಶೈಲಿಯಿಂದ ನೈಸರ್ಗಿಕ ಸಂಪತ್ತು ದುರ್ಬಳಕೆ ಆಗುತ್ತಿದೆ. ಜೊತೆಗೆ ಮನುಷ್ಯನ ಸ್ವಾರ್ಥದಿಂದಾಗಿ ಪ್ರಕೃತಿ ಇಂದು ವಿನಾಶದ ಅಂಚಿನಲ್ಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲೆ ನಿತ್ಯ ದೌರ್ಜನ್ಯ ನಡೆಸಲಾಗುತ್ತಿದೆ. ಪ್ರಕೃತಿ ಮುನಿಯತೊಡಗಿದ್ದು, ಭೂಕಂಪ, ಪ್ರವಾಹಗಳು ಉಂಟಾಗಿ ಮನುಷ್ಯನ ನೆಮ್ಮದಿ ಹಾಳಾಗಿದೆ. ಆದರೂ ಕೂಡ ಪಾಠ ಕಲಿಯದ ಮನುಷ್ಯ ತನ್ನ ವೈಭೋಗದ ಜೀವನ ಶೈಲಿಗೆ ಪ್ರಕೃತಿಯನ್ನು ಮನಬಂದಂತೆ ದುರ್ಬಳಕೆ ಮಾಡತೊಡಗಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಪ್ರಕೃತಿಯ ಸೂಕ್ಷ್ಮತೆ ಅರಿಯದ ಮನುಷ್ಯನ ತಪ್ಪುಗಳಿಂದ ಪ್ರಕೃತಿ ಬಳಲುತ್ತಿದೆ. ನಾವುಗಳು ಪ್ರಕೃತಿಯ ಮೇಲೆ ಸೂಕ್ಷ್ಮಸಂವೇದನೆ ಹೊಂದುವ ಮೂಲಕ, ಅದನ್ನು ಮಾತೃ ಸ್ವರೂಪದಲ್ಲಿ ಪೂಜಿಸಿ ಸಂರಕ್ಷಿಸಬೇಕಿದೆ. ಜನರನ್ನು ಬಲಿ ಪಡೆವ ಮದ್ದು ಗುಂಡುಗಳು, ಬಾಂಬುಗಳ ಸದ್ದು ಅಡಗಲು ಶಾಂತಿ ಮಂತ್ರ ಎಲ್ಲೆಡೆ ಮೊಳಗಬೇಕಿದೆ ಎಂದು ಶಂಕರಾನಂದ್ ಹೇಳಿದರು.

ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿ ಅಶೋಕ್ ಸಂಗಪ್ಪ ಆಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗಿನ ಜನರು ಬೆಳೆಸಿ ಸಂರಕ್ಷಿಸಿರುವ ಪಶ್ಚಿಮಘಟ್ಟದ ಹಸಿರಿನ ಸಮೃದ್ಧ ಜೀವ ವೈವಿಧ್ಯವು ಅರ್ಧ ಭಾರತ ದೇಶಕ್ಕೆ ಶುದ್ಧ ಗಾಳಿಯನ್ನು ನೀಡಲು ಸಾಧ್ಯವಾಗುತ್ತಿದೆ. ಪರಿಸರ, ಜೀವ ಜಲದ ಸಂರಕ್ಷಣೆಯಲ್ಲಿ ಕೊಡಗಿನ ಜನರಲ್ಲಿ ಇರುವ ಸದ್ಭಾವನೆ ಇತರರಿಗೆ ಮಾದರಿಯಾಗಿದೆ ಎಂದರು.

ಕೊಡಗು ವಿಶ್ವ ವಿದ್ಯಾನಿಲಯದ ವಿಶೇಷಾಧಿಕಾರಿ ರವಿಶಂಕರ್ ಮಾತನಾಡಿ, ಕೊಡಗಿನ ಪೂರ್ವಜರು ತಮ್ಮ ಉಡುಪು, ಆಚಾರ ವಿಚಾರ ಹಾಗೂ ಸಂಸ್ಕೃತಿಗಳ ಭಾಗವಾಗಿ ಅರಣ್ಯ ಹಾಗೂ ಪ್ರಕೃತಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ.
ಇಂದು ಕೊಡಗಿನಲ್ಲಿ ಜೀವ ವೈವಿಧ್ಯ ಹೇರಳವಾಗಿದೆ. ಆದರೂ ಮುಂದಿನ ಪೀಳಿಗೆಗೆ ಇದನ್ನು ಜೋಪಾನವಾಗಿ ಉಳಿಸಿ ಬೆಳೆಸುವುದು ಎಲ್ಲರ ಆದ್ಯ ಕರ್ತವ್ಯ ವಾಗಬೇಕು ಎಂದರು.

ಈ ಸಂದರ್ಭ ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್.ಗಂಗಾಧರ, ಹಾವೇರಿ ವಿವಿ ಕುಲಪತಿ ಸುರೇಶ್ ಎಚ್.ಜಂಗಮಶೆಟ್ಟಿ, ಹಾಸನ ವಿವಿ ಕುಲಪತಿ ಡಾ.ಸಿ. ತರೀಕೆರೆ ತಾರನಾಥ್, ಬಾಗಲಕೊಟೆ ವಿವಿ ಕುಲಪತಿ ಡಾ.ಆನಂದ ದೇಶಪಾಂಡೆ, ಬೆಂಗಳೂರಿನ ಮೆಟೀರಿಯಲ್ ಇಂಜಿನಿಯರಿಂಗ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರೊ.ಪ್ರವೀಣ್ ಸಿ.ರಾಮಮೂರ್ತಿ, ಪ್ರೊ.ಚಂದ್ರಶೇಖರ್ ಬಿರಾದಾರ್, ಐಐಎಸ್ಸಿ ಜಂಟಿ ನಿರ್ದೇಶಕ ಡಾ.ಕೆ.ವೀರಣ್ಣ, ಸುಬ್ಬಾರೆಡ್ಡಿ, ವಿ.ಆರ್.ಸೌಮಿತ್ರಿ, ಗಂಗಾ ಅಂಕದ್ ಕೊಡಗು ವಿವಿ ಕುಲಸಚಿವ ಪ್ರೊ. ಎಂ.ಸುರೇಶ್, ಉಪನ್ಯಾಸಕ ಸುದರ್ಶನ ಪಾಲ್ಗೊಂಡಿದ್ದರು.

ಕುಶಾಲನಗರ ಸಮೀಪದ ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಹಸಿರು ಸಂರಕ್ಷಣೆಯಲ್ಲಿ ಕೊಡಗಿನ ಜೀವವೈವಿಧ್ಯ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷ ಬಿ.ಆರ್. ಶಂಕರಾನಂದ ಅವರೊಂದಿಗೆ ವಿವಿಧ ವಿಶ್ವ ವಿದ್ಯಾನಿಲಯ ಕುಲಪತಿಗಳು ಪಾಲ್ಗೊಂಡಿದ್ದರು.

‘ವಿದ್ಯಾರ್ಥಿ ದಿಸೆಯಿಂದಲೇ ಜಾಗೃತಿ ಮೂಡಿಸಿ’

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಡಾ.ಎ.ಎಚ್.ರಾಜಾಸಾಬ್ ಮಾತನಾಡಿ ಕೊಡಗಿನಲ್ಲಿ ಇರುವ ಸಮೃದ್ಧ ಜೀವ ವೈವಿಧ್ಯತೆಗೆ ಇಲ್ಲಿನ ದೇವರ ಕಾಡುಗಳು ಹಾಗೂ ಔಷಧೀಯ ಗುಣಗಳನ್ನು ಹೊಂದಿದ ದೇವರ ಮರಗಿಡಗಳು ಪ್ರಮುಖವಾಗಿವೆ. ಪ್ರಕೃತಿಗೆ ಕಂಟಕ ಎದುರಾಗುವ ಲಕ್ಷಣಗಳು ಗೋಚರವಾದಾಗ ಪೂರ್ವಜರು ಪ್ರಕೃತಿಯನ್ನು ಸಂರಕ್ಷಿಸಲು ಅರಣ್ಯಕ್ಕೆ ದೇವರ ಕಾಡುಗಳ ಸ್ವರೂಪ ಕೊಟ್ಟಿರುವುದು ಮಾತ್ರ ವಿಶೇಷವಾದ ಸಂಗತಿಯಾಗಿದೆ ಎಂದರು. ಇಂದು ಪ್ರಕೃತಿಯ ಸಂರಕ್ಷಣೆಯ ದೃಷ್ಟಿಯಿಂದ ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಜಾಗೃತಿ ಮೂಡಿಸುವುದು ಅತಿ ಮುಖ್ಯ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.