
ಮಡಿಕೇರಿ: ಸಾಧಕರು, ಸುಧಾರಕರನ್ನು ಕೇವಲ ಅವರ ಜಯಂತಿಗಳಂದು ಮಾತ್ರ ನೆನೆಯದೆ ವರ್ಷಪೂರ್ತಿ ನೆನೆಯಬೇಕು. ಅವರ ಪಥದಲ್ಲಿ ಹೆಜ್ಜೆ ಹಾಕಬೇಕು ಎಂದು ಶಾಸಕ ಡಾ.ಮಂತರ್‌ಗೌಡ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಇಲ್ಲಿನ ಗಾಂಧಿ ಭವನದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಡಿವಾಳ ಮಾಚಿದೇವರ ತತ್ವ ಮತ್ತು ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗಿಯಾಗಿರುವುದರಿಂದ ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎನಿಸಿದೆ ಎಂದರು.
ಸಮಾನತೆಯನ್ನು ಮಡಿವಾಳ ಮಾಚಿದೇವರು ಅಂದೇ ಬೋಧಿಸಿದರು. ಆದರೆ, ಇಂದಿಗೂ ಸಮಾನತೆ ಎನ್ನುವುದು ಬಂದಿಲ್ಲ. ಮಕ್ಕಳನ್ನು ವಿಭಜಿಸುತ್ತಿದ್ದೇವೆ. ಇದು ಸರಿಯಲ್ಲ ಎಂದು ಹೇಳಿದರು.
‘ನಾನೊಬ್ಬ ವೈದ್ಯ. ಬಂದ ರೋಗಿಗಳ ಕುಲ, ಜಾತಿ ಕೇಳದೇ ಚಿಕಿತ್ಸೆ ನೀಡುವಂತೆ ರಾಜಕಾರಣಿಯಾಗಿಯೂ ನಾನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸೇವೆಗೈಯ್ಯುತ್ತಿರುವೆ’ ಎಂದರು.
ಮಡಿವಾಳ ಮಾಚಿದೇವ ಅವರು ಸಾಮಾಜಿಕ ಸುಧಾರಣೆಯನ್ನು ಮಾತ್ರ ಮಾಡಲಿಲ್ಲ. ಅವರು ಅಧ್ಯಾತ್ಮಿಕ ಬದುಕನ್ನು ನಡೆಸಿದರು. ಆದರೆ, ಇಂದು ಸಾಮಾಜಿಕ ಕಾಳಜಿ ಯಾರಿಗೂ ಇಲ್ಲ. ಬಹುತೇಕರ ಮಂದಿ ಸಮಾಜ ಸೇವೆಗೆ ಕೊನೆಯ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.
‘ನಮಗಿರುವುದಷ್ಟೇ ಸಾಕು, ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎನ್ನುವುದು ಎಲ್ಲರಲ್ಲೂ ಬರಬೇಕು. ಓದುವುದು ಮಾತ್ರವಲ್ಲ ಸಮಾಜ ಸೇವೆ ಹೇಗೆ ಮಾಡಬೇಕು ಎಂಬುದನ್ನು ಸಹ ಮಕ್ಕಳು ಕಲಿಯಬೇಕು ಎಂದರು.
ಮುಂದಿನ ವರ್ಷದ ಕಾರ್ಯಕ್ರಮದಲ್ಲಿ ಸಮಾಜದ ಭವನದಲ್ಲಿ ಮಾಡಬೇಕು. ಇಂತಹ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ಬರಬೇಕು. ಸಮಾಜದ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದರು.
ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಒತ್ತಾಯವಾಗಿ ಕರೆಸಬಾರದು ಎಂದೂ ಹೇಳಿದರು.
ತಹಶೀಲ್ದಾರ್ ಶ್ರೀಧರ್, ನಿವೃತ್ತ ಉಪನ್ಯಾಸಕ ಶಂಕರಯ್ಯ, ಮಡಿವಾಳರ ಅಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ.ಸುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಮುಖಂಡರಾದ ಮಂಜುನಾಥ್, ದೀಪಿಕಾ, ಪ್ರಸನ್ನಭಟ್ಟ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.