ಮಡಿಕೇರಿ: ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಅಧಿಕೃತ ಕಚೇರಿಯನ್ನು ಭಾನುವಾರ ಉದ್ಘಾಟಿಸಿದರು. ಇದಕ್ಕೂ ಮುನ್ನ ಹೋಮ, ಹವನಗಳು ಹಾಗೂ ಧಾರ್ಮಿಕ ಕೈಂಕರ್ಯಗಳಲ್ಲಿ ಅವರು ಭಾಗಿಯಾದರು.
ನಂತರ ಮಾತನಾಡಿದ ಅವರು, ‘ನಾನಿಲ್ಲಿ ವಾರದಲ್ಲಿ ಒಂದು ದಿನ ಸಾರ್ವಜನಿರಿಗೆ ಸಿಗುವ ಪ್ರಯತ್ನ ಮಾಡುವೆ. ವಾರದಲ್ಲಿ 3 ದಿನಗಳ ಕಾಲ ನನ್ನ ಆಪ್ತ ಸಹಾಯಕರು ಇಲ್ಲಿರುತ್ತಾರೆ ಹಾಗೂ ಎಲ್ಲ ದಿನ ಸಲಹೆಗಾರರು ಇರುವಂತೆ ನೋಡಿಕೊಳ್ಳಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆ, ಅಹವಾಲುಗಳನ್ನು ಕಚೇರಿಯಲ್ಲಿ ನೇರವಾಗಿ ಸಲ್ಲಿಸಬಹುದು’ ಎಂದು ಹೇಳಿದರು.
ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಘಟನೆ ನಿಜಕ್ಕೂ ನನಗೆ ಅಸಮಾಧಾನ ತರಿಸಿದೆ. ರಾಜ್ಯ ಸರ್ಕಾರ ಇದರ ಹೊಣೆ ಹೊರಬೇಕು, ಆರೋಗ್ಯ ಖಾತೆ ಸಚಿವರು ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು.
‘ವಿರೋಧ ಪಕ್ಷವಾಗಿ ನಾವು ತೀವ್ರ ಹೋರಾಟ ಮಾಡುತ್ತೇವೆ. ಮೃತರ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಇರುತ್ತದೆ’ ಎಂದು ಹೇಳಿದರು.
‘ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ನಾವು ಎಲ್ಲಾ ರೀತಿಯಲ್ಲೂ ಒಗ್ಗಟ್ಟಾಗಿ ಇದ್ದೇವೆ. ಮುಂದೆಯೂ ಒಗ್ಗಟ್ಟಾಗಿ ಇರುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಒಳ್ಳೆಯ ಆಡಳಿತ ಬರಬೇಕು. ಆ ಮೂಲಕ ರಾಜ್ಯದ ಅಭಿವೃದ್ಧಿ ಆಗಬೇಕು. ಆ ದೃಷ್ಟಿಯಿಂದ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಈಗಾಗಲೇ ಪಕ್ಷದ ಹಿರಿಯರೆಲ್ಲರೂ ಸೇರಿ ನಿರ್ಧರಿಸಿದ್ದಾರೆ. ಅವರು ನಿಲುವಿನಂತೆ ನಾವೆಲ್ಲರೂ ಕೆಲಸ ಮಾಡುತ್ತೇವೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮುಖಂಡರಾ ಅನಿತಾ ಪೂವಯ್ಯ, ಉಮೇಶ್ ಸುಬ್ರಮಣಿ, ಬೊಳ್ಳಜಿರ ಬಿ ಅಯ್ಯಪ್ಪ, ಸಬಿತಾ, ಶ್ವೇತಾ ಪ್ರಶಾಂತ್ ಭಾಗವಹಿಸಿದ್ದರು.
ಚತುಷ್ಪಥ ರಸ್ತೆ ಕಾಮಗಾರಿ
3 ತಿಂಗಳಲ್ಲಿ ಆರಂಭ ಮೈಸೂರು– ಕುಶಾಲನಗರ ಚತುಷ್ಪಥ ರಸ್ತೆ ಕಾಮಗಾರಿ ಇನ್ನು 3 ತಿಂಗಳಿನಲ್ಲಿ ಆರಂಭವಾಗಲಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಈಗಾಗಲೇ ಭೂಮಿ ಸರ್ವೆ ಕಾರ್ಯ ಆರಂಭವಾಗಿದೆ. ಜೊತೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.