ADVERTISEMENT

ಕುಶಾಲನಗರ ಪುರಸಭೆ | ಮಹಿಳಾ ಸಿಬ್ಬಂದಿ ನಿಂದನೆ: ಖಂಡನೆ

ದೂರು ನೀಡಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:30 IST
Last Updated 23 ಸೆಪ್ಟೆಂಬರ್ 2025, 5:30 IST
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು   

ಕುಶಾಲನಗರ: ಪುರಸಭೆ ಕಚೇರಿಗೆ ವೈಯಕ್ತಿಕ ಕೆಲಸಕ್ಕೆ ಆಗಮಿಸಿದ್ದ ವ್ಯಕ್ತಿಯು ಮಹಿಳಾ ಸಿಬ್ಬಂದಿಯನ್ನು ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆಯನ್ನು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ತೀವ್ರವಾಗಿ ಖಂಡಿಸಿದರು.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ವಿ.ಎಸ್.ಆನಂದ್ ಕುಮಾರ್, ‘ವೈಯಕ್ತಿಕ ಕೆಲಸಕ್ಕೆ ಬಂದ ಮಧ್ಯವರ್ತಿಯು ಮಹಿಳಾ ಸಿಬ್ಬಂದಿಯನ್ನು ನಿಂದಿಸಿರುವ ಕ್ರಮ ಸರಿಯಲ್ಲ. ಮಹಿಳಾ ಸಿಬ್ಬಂದಿಗೆ ರಕ್ಷಣೆ ನೀಡುವಲ್ಲಿ ಮುಖ್ಯಾಧಿಕಾರಿ ವಿಫಲರಾಗಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಆ ವ್ಯಕ್ತಿ ವಿರುದ್ಧ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಎಲ್ಲಾ ಸದಸ್ಯರೂ ಬೆಂಬಲ ಸೂಚಿಸಿದರು.

‘ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿದ್ದು, ಶಾಲಾ ಮಕ್ಕಳು ಸೇರಿದಂತೆ ಅನೇಕ ಮಂದಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಆದ್ದರಿಂದ ಈ ಕೂಡಲೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ‘ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಿ ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಬೀದಿ ನಾಯಿ ಹಾವಳಿಗೆ ನಿಯಂತ್ರಣ ಹಾಕಲಾಗುತ್ತದೆ’ ಎಂದು ಹೇಳಿದರು.

ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ದೀಪ ನಿರ್ವಹಣೆ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಎಂದು ಸದಸ್ಯ ಆನಂದ್, ಜೈವರ್ಧನ್, ಅಮೃತ್ ರಾಜ್ ಅಸಮಾಧಾನ ವ್ಯಕ್ತಪಡಿಸಿದರು. ‘ಬೀದಿ ದೀಪಕ್ಕೆ ಒಬ್ಬರಿಗೆ ಟೆಂಡರ್, ನಿರ್ವಹಣೆಗೆ ಒಬ್ಬರಿಗೆ ಟೆಂಡರ್ ನೀಡುವ ಕ್ರಮ ಸರಿಯಲ್ಲ. ಬೀದಿ ದೀಪ ಅಳವಡಿಕೆ ಹಾಗೂ ನಿರ್ವಹಣೆಗೂ ಏಕ ವ್ಯಕ್ತಿಗೆ ಟೆಂಡರ್ ನೀಡಬೇಕು’ ಎಂದು ಸದಸ್ಯ ಜೈವರ್ಧನ್ ಸಲಹೆ ನೀಡಿದರು.

‘ಗಂಧದಕೋಟೆ ಹಾಗೂ ಗೊಂದಿಬಸವನಹಳ್ಳಿ ಸುತ್ತಮುತ್ತಲ ಬಡಾವಣೆಗಳಿಗೆ ₹32 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಸೌಲಭ್ಯ ‌ಕಲ್ಪಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಪೂನಂ ಬಡಾವಣೆ ಕೊಳವೆ ಬಾವಿ ಕೊರೆಸಲಾಗಿದೆ’ ಎಂದು ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ತಿಳಿಸಿದರು.

ಸದಸ್ಯ ಎಂ.ಎಂ.ಪ್ರಕಾಶ್ ಮಾತನಾಡಿ, ‘ಗೊಂದಿಬಸವನಹಳ್ಳಿಯಲ್ಲಿ ರಸ್ತೆ ಪಕ್ಕದಲ್ಲಿ ಮರವೊಂದು ಒಣಗಿ ಬೀಳುವ ಹಂತದಲ್ಲಿದ್ದು, ಅನಾಹುತ ಸಂಭವಿಸುವ ಮುನ್ನ ಮರ ತೆರವುಗೊಳಿಸಲು ಕ್ರಮ‌ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸದಸ್ಯ ಪ್ರಮೋದ್ ಮಾತನಾಡಿ, ‘ಭುವನಗಿರಿ ಗ್ರಾಮದಲ್ಲಿರುವ ಕಸವಿಲೇವಾರಿ ಘಟಕದಲ್ಲಿ ತ್ಯಾಜ್ಯವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದರು. ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ನಿರೀಕ್ಷಕ ಉದಯಕುಮಾರ್, ತ್ಯಾಜ್ಯ ತೆರವಿಗೆ ₹3.5 ಕೋಟಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದರು.

ಪುರಸಭೆಯ ಹಳೆಯ ವೆಂಕಟೇಶ್ವರ ಚಿತ್ರ ಮಂದಿರ, ಹೊಸ ಪುರಸಭೆ ಕಚೇರಿ ಮೇಲ್ಭಾಗದಲ್ಲಿ ವಾಣಿಜ್ಯ ಉದ್ದೇಶ ಜಾಗ ಬಾಡಿಗೆ ಕೊಡಲು ಹಾಗೂ ವಾಹನ‌ ನಿಲುಗಡೆ ಜಾಗವನ್ನು ಟೆಂಡರ್ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಉಪಾಧ್ಯಕ್ಷೆ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಪಾಲ್ಗೊಂಡಿದ್ದರು.

ಅನುಮತಿ ಪಡೆಯದೆ ಬಡಾವಣೆ: ಕ್ರಮಕ್ಕೆ ಆಗ್ರಹ ‘ಪುರಸಭೆಯಿಂದ ಯಾವುದೇ ಅನುಮತಿ ಪಡೆಯದೆ ಹೊಸದಾಗಿ ಭಾಸ್ಕರ್ ಬಡಾವಣೆ ಹಾಗೂ ಸಿಂಗರಮ್ಮ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಬಡಾವಣೆ ಕಸವನ್ನು ಜೆಸಿಬಿ ಮೂಲಕ ಕಾವೇರಿ ನದಿಗೆ ಹಾಕಲಾಗುತ್ತಿದೆ’ ಎಂದು ಸದಸ್ಯೆ ಸುರೇಯಾಬಾನು ದೂರಿದರು. ‘ಹೊಸ ಬಡಾವಣೆ ನಿರ್ಮಾಣ ಸಂದರ್ಭ ಆ ಭಾಗದ ಸದಸ್ಯರ ಅನುಮತಿ ಪಡೆಯಬೇಕು. ಜೊತೆಗೆ ಮುಖ್ಯಾಧಿಕಾರಿಗಳು ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ‌ ಕೈಗೊಳ್ಳಬೇಕು’ ಎಂದು ಶೇಖ್ ಖಲಿಮುಲ್ಲಾ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.