
ಮಡಿಕೇರಿ: ಚೆಟ್ಟಳ್ಳಿಯಲ್ಲಿ ಷಷ್ಠಿಯ ಒಂದು ದಿನದ ಮುಂಚಿತವಾಗಿ ನಾಗರ ಪಂಚಮಿಯನ್ನು ಹಲವೆಡೆ ಪೂಜಿಸಲಾಯಿತು. ವಾರ್ಷಿಕ ನಾಗರ ಪಂಚಮಿಯನ್ನು ಶ್ರದ್ದಾಭಕ್ತಿಯಿಂದ ಅಚರಿಸಲಾಯಿತು.
ಬೆಳಿಗ್ಗೆ 7.30ಕ್ಕೆ ಅರ್ಚಕರಾದ ರಾಧಕೃಷ್ಣ ಭಟ್ ಅವರು ಪುತ್ತರಿರ ಐನ್ ಮನೆಯ ಸಮೀಪದ ಪುರಾತನ ನಾಗನೆಲೆಯನ್ನು ಶುದ್ಧಗೊಳಿದರು. ಹೂವು, ಹಣ್ಣು ಪಾಯಸದ ಅರ್ಪಣೆಯೊಂದಿಗೆ ಮಹಾಪೂಜೆಯನ್ನು ನೆರವೇರಿಸಲಾಯಿತು.
ವರ್ಷಂಪ್ರತಿ ಪಂಚಮಿಯಂದು ನಾಗನೆಲೆಯಲ್ಲಿ ಪೂಜೆ ಸಲ್ಲಿಸಲಾಗುತಿದ್ದು, ಎಲ್ಲರಿಗೂ ಒಳಿತನ್ನು ಮಾಡಲೆಂದು ಹಿರಿಯರಾದ ಪುತ್ತರಿರ ಗಣೇಶ್ ಭೀಮಯ್ಯ ಅವರು ಬೇಡಿಕೊಂಡರು. ನಂತರ, ಪ್ರಸಾದ ವಿತರಣೆ ನೆರವೇರಿತು.
ಓಂಕಾರೇಶ್ವರ ದೇವಾಲಯದಲ್ಲಿ ಇಂದು ಸುಬ್ರಹ್ಮಣ್ಯ ಷಷ್ಠಿ
ಇಲ್ಲಿನ ಓಂಕಾರೇಶ್ವರ ದೇವಾಲಯದಲ್ಲಿ ನ. 26ರಂದು ‘ಶ್ರೀ ಸುಬ್ರಹ್ಮಣ್ಯ ಷಷ್ಠಿ’ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ. ಅಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಂತರ ದೇವಾಲಯದ ಆವರಣದಲ್ಲಿ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಲಿದೆ.
ಮುತ್ತಪ್ಪ ದೇವಾಲಯದಲ್ಲಿ:
ಇಲ್ಲಿನ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಸುಬ್ರಹ್ಮಣ್ಯ ಗುಡಿಯಲ್ಲಿ ನ. 26ರಂದು ಸುಬ್ರಹ್ಮಣ್ಯಸ್ವಾಮಿ ಷಷ್ಠಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆಯಿಂದಲೆ ವಿಶೇಷ ಅಭಿಷೇಕಗಳು, ಸೇವೆಗಳು ನಡೆಯಲಿದ್ದು, ನಂತರ ವಿವಿಧ ವೆಳ್ಳಾಟಂಗಳು ಜರುಗಲಿವೆ. ಮಧ್ಯಾಹ್ನ ಅನ್ನದಾನ ಇರಲಿದೆ.
ಸಂಜೆ ಭಜನೆ, ರಂಗಪೂಜೆ ಇರಲಿದ್ದು, ಅನ್ನದಾನವೂ ಇರಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಇದಲ್ಲದೇ ಮಡಿಕೇರಿಯ ವಿವಿಧ ದೇಗುಲಗಳು, ರಾಣಿಪೇಟೆಯಲ್ಲಿರುವ ನಾಗಸ್ಥಾನ, ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆಗಳು ನಡೆಯಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈಗಾಗಲೇ ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.