ADVERTISEMENT

ಕೊಡಗಿನಲ್ಲಿ ಶ್ರದ್ಧಾಭಕ್ತಿಯ ನಾಗರಪಂಚಮಿ

ಹಲವು ದೇಗುಲಗಳಲ್ಲಿ ವಿಶೇಷ ಪೂಜೆ, ಸಾವಿರಾರು ಜನ ಭಾಗಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 6:07 IST
Last Updated 30 ಜುಲೈ 2025, 6:07 IST
ಮಡಿಕೇರಿಯ ಮುತ್ತಪ್ಪ ದೇಗುಲದಲ್ಲಿನ ನಾಗರ ಕಲ್ಲುಗಳಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು
ಮಡಿಕೇರಿಯ ಮುತ್ತಪ್ಪ ದೇಗುಲದಲ್ಲಿನ ನಾಗರ ಕಲ್ಲುಗಳಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಇಲ್ಲಿನ ಮುತ್ತಪ್ಪ ದೇವಾಲಯದಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾದವು. ಕ್ಷೀರಾಭಿಷೇಕ, ಎಳನೀರಿನ ಅಭಿಷೇಕ ಹಾಗೂ ಬಹಳ ವಿಶೇಷವಾದ ಶೇಷಸೇವೆಯೂ ಇಲ್ಲಿ ನಡೆಯಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರಿತು. ಹರಕೆ ಹೊತ್ತವರು ತಮ್ಮ ಹರಕೆಗಳನ್ನು ಸಲ್ಲಿಸಿದರು. ಪ್ರಸಾದ ವಿನಿಯೋಗವೂ ನಡೆಯಿತು.

ಅರ್ಚಕರಾದ ಅರವಿಂದ ಭಟ್, ರಾಮಕೃಷ್ಣ ಭಟ್ ಅವರ ನೇತೃತ್ವದಲ್ಲಿ ಪೂಜಾಕೈಂಕರ್ಯಗಳು ನಡೆದವು. ಮುತ್ತಪ್ಪ ದೇಗುಲ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್, ಸಹ ಕಾರ್ಯದರ್ಶಿ ಆರಾಧಾನ ಗಿರೀಶ, ಭಾಗವಹಿಸಿದ್ದರು. ಸುಮಾರು ಸಾವಿರಕ್ಕೂ ಅಧಿಕ ಮಂದಿ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು.

ADVERTISEMENT

ಇಲ್ಲಿನ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಅಶ್ವತ್ಥ ಕಟ್ಟೆ ಹಾಗೂ ವಿವಿಧ ದೇಗುಲಗಳಲ್ಲಿನ  ನಾಗರಕಲ್ಲುಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಮುತ್ತಪ್ಪ, ಅಯ್ಯಪ್ಪ ದೇವಾಲಯದಲ್ಲಿ ನಾಗರ ಪಂಚಮಿ

ಸೋಮವಾರಪೇಟೆ: ಇಲ್ಲಿನ ಮುತ್ತಪ್ಪ ಮತ್ತು ಅಯ್ಯಪ್ಪ ದೇವಾಲಯದ ಆವರಣದಲ್ಲಿ ನಾಗರ ಪಂಚಮಿ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆಗಳು ನಡೆದವು.

ದೇವಾಲಯದ ಆವರಣದಲ್ಲಿರುವ ನಾಗರ ಬನದಲ್ಲಿ ಬೆಳಿಗ್ಗೆ ಎಳನೀರು, ಹರಿಶಿಣ, ಹಾಲು ಅಭಿಷೇಕ, ಹೂವಿನ ಅಲಂಕಾರ ಮಹಾಮಂಗಳಾರತಿ ನಡೆಯಿತು.

ಅರ್ಚಕರಾದ ಮಣಿಕಂಠ ನಂಬೂದರಿ ಅವರು ಎಲ್ಲ ಪೂಜಾ ಕಾರ್ಯವನ್ನು ನಡೆಸಿದರು. ಈ ವೇಳೆ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

ಸೋಮವಾರಪೇಟೆ ಮುತ್ತಪ್ಪ ಮತ್ತು ಅಯ್ಯಪ್ಪ ದೇವಾಲಯದ ಆವರಣದಲ್ಲಿ ನಾಗರ ಬನದಲ್ಲಿ ಹೂವಿನ ಅಲಂಕಾರ ಮಾಡಿರುವುದು. 
ಮಡಿಕೇರಿಯ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಮಂಗಳವಾರ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.