ADVERTISEMENT

ನಾಗರಹೊಳೆ: ಮುಂದುವರಿದ ಆದಿವಾಸಿಗಳ ಪ್ರತಿಭಟನೆ

ಹೊರಗಡೆ ಬಂದವರಿಗೆ ತಡೆ, ಸ್ಥಳೀಯರಿಗಷ್ಟೇ ಅರಣ್ಯ ಪ್ರವೇಶಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 10 ಮೇ 2025, 8:10 IST
Last Updated 10 ಮೇ 2025, 8:10 IST
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕರಡಿಕಲ್ಲು ಅತ್ತೂರುಕೊಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಜೇನು ಕುರುಬ ಸಮುದಾಯಕ್ಕೆ ಸೇರಿದ 52 ಕುಟುಂಬಗಳ ಸದಸ್ಯರು ಹಾಗೂ ಅಕ್ಕಪಕ್ಕದ ಹಾಡಿಗಳಿಂದ ಬಂದಿದ್ದ ಇತರ ಹಾಡಿಗಳ ಮುಖಂಡರು ಶುಕ್ರವಾರ ಸಭೆ ನಡೆಸಿದರು
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕರಡಿಕಲ್ಲು ಅತ್ತೂರುಕೊಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಜೇನು ಕುರುಬ ಸಮುದಾಯಕ್ಕೆ ಸೇರಿದ 52 ಕುಟುಂಬಗಳ ಸದಸ್ಯರು ಹಾಗೂ ಅಕ್ಕಪಕ್ಕದ ಹಾಡಿಗಳಿಂದ ಬಂದಿದ್ದ ಇತರ ಹಾಡಿಗಳ ಮುಖಂಡರು ಶುಕ್ರವಾರ ಸಭೆ ನಡೆಸಿದರು   

ಮಡಿಕೇರಿ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಕರಡಿಕಲ್ಲು ಅತ್ತೂರು ಕೊಲ್ಲಿ ಪ್ರದೇಶದಲ್ಲಿ ಅರಣ್ಯ ಹಕ್ಕು ಕಾಯ್ದೆಯ ವೈಯಕ್ತಿಕ ಹಕ್ಕು ಹಾಗೂ ಸಮುದಾಯ ಹಕ್ಕುಗಳಿಗಾಗಿ ಜೇನು ಕುರುಬ ಸಮುದಾಯಕ್ಕೆ ಸೇರಿದ್ದ 52 ಆದಿವಾಸಿ ಕುಟುಂಬಗಳು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದೆ.

ಸುತ್ತಮುತ್ತಲ ಹಾಡಿಗಳಾದ ಬೊಮ್ಮಾಡು, ಗೋಣಿಗೆಡ್ಡೆ, ಕೊಡಂಗೆ, ನಾಣಚ್ಚಿ ಗದ್ದೆಹಾಡಿ, ಬಾಳೆಕೊವಾಡಿ, ಸಂದಣಿಕೆರೆ, ನಾಗರಹೊಳೆ, ಕೋಳಂಗೆರೆ ಹಾಗೂ ಇತರೆ ಹಾಡಿಗಳ ಸುಮಾರು 150 ಮಂದಿ ಭೇಟಿ ನೀಡಿ ಅರಣ್ಯ ಇಲಾಖೆ ತೆರವು ಮಾಡುವಂತೆ ನೀಡಿರುವ ನೋಟಿಸ್ ಕುರಿತು ಚರ್ಚೆ ನಡೆಸಿದರು.

ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ನಾಗರಹೊಳೆ ಆದಿವಾಸಿ ಜಮ್ಮಾಪಾಳೆ ಹಕ್ಕು ಸ್ಥಾಪನಾ ಸಮಿತಿ ಕಾರ್ಯದರ್ಶಿ ಶಿವು, ‘ಸೋಮವಾರಪೇಟೆ ಮತ್ತು ಎಚ್.ಡಿ.ಕೋಟೆ ತಾಲ್ಲೂಕುಗಳಿಂದ ಬಂದಿದ್ದ ಸುಮಾರು 50 ಮಂದಿ ಆದಿವಾಸಿ ಮುಖಂಡರಿಗೆ ಪೊಲೀಸರು ತಡೆ ಒಡ್ಡಿದರು ಎಂದು ದೂರಿದರು. ಹಾಗಾಗಿ, ನೋಟಿಸ್‌ಗೆ ಉತ್ತರ ಏನು ನೀಡಬೇಕು ಎಂಬ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ. ಸದ್ಯ, ಪ್ರತಿಭಟನೆ ಮುಂದುವರಿದಿದೆ’ ಎಂದು ಹೇಳಿದರು.

ADVERTISEMENT

ಘಟನೆ ಹಿನ್ನೆಲೆ: ತಮ್ಮನ್ನು ಈ ಹಿಂದಿನ ದಶಕಗಳಲ್ಲಿ ಬಲವಂತವಾಗಿ ಒಕ್ಕಲೆಬ್ಬಿಸಿದ್ದು, ತಮಗೆ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ವೈಯಕ್ತಿಕ ಹಾಗೂ ಸಮುದಾಯ ಹಕ್ಕು ಕೊಡಬೇಕು ಎಂದು ಒತ್ತಾಯಿಸಿ ಜೇನು ಕುರುಬ ಸಮುದಾಯಕ್ಕೆ ಸೇರಿದ್ದ 52 ಆದಿವಾಸಿ ಕುಟುಂಬಗಳು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದೊಳಗಿನ ಕರಡಕಲ್ಲು ಅತ್ತೂರುಕೊಲ್ಲಿಗೆ ಮೇ 5ರಂದು ಬಂದು ಪ್ರತಿಭಟನೆ ಆರಂಭಿಸಿದ್ದರು.

ನಟ ಚೇತನ್ ಪ್ರತಿಭಟನಾ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದ್ದರು. ಈ ಸಂಬಂಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸರ್ವೇ ಕಾರ್ಯ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ಜುಲೈ 23ರವರೆಗೂ ಕೈಗೊಳ್ಳದಂತೆ ಮೇ 6ರಂದು ತಡೆಯಾಜ್ಞೆ ನೀಡಿತ್ತು. ಗುರುವಾರ ಅರಣ್ಯದಿಂದ ಹೊರಬರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ‍ಪ್ರತಿಭಟನಾನಿರತರಿಗೆ ನೋಟಿಸ್ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.