ಮಡಿಕೇರಿ: ನಾಪೋಕ್ಲುವಿನಲ್ಲಿ ಶನಿವಾರ ಗೌತಮ್ ಎಂಬುವವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಪಕ್ಷಾತೀತವಾದ ಖಂಡನೆ ವ್ಯಕ್ತವಾಗಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರು ಪತ್ಯೇಕವಾಗಿ ಘಟನೆಯನ್ನು ಖಂಡಿಸಿದ್ದಾರೆ.
ಬಿಜೆಪಿಯ ವಿಧಾನಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಇಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ, ‘ನಾಪೋಕ್ಲುವಿನಲ್ಲಿ ನಡೆದ ಹಲ್ಲೆ ಪ್ರಕರಣದ ಆರೋಪಿಗಳನ್ನು ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿದರು.
ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಕುರಿತು ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಏನೇ ಆಗಲಿ ಆರೋಪಿಗಳನ್ನು ಬಂಧಿಸಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಧನ್ಯವಾದ ಅರ್ಪಿಸಲಾಗುವುದು ಎಂದರು.
ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ನಡೆಸುತ್ತಿದ್ದ ಮಾದಕವಸ್ತು ವಿರುದ್ಧದ ಕಠಿಣ ಕಾರ್ಯಾಚರಣೆಯನ್ನು ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ‘ಈಗ ಜನರ ಒತ್ತಡ ಹೆಚ್ಚಿದ್ದರಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಆದಾಗ್ಯೂ ನಾವು ಭಯದ ವಾತಾವರಣದಲ್ಲಿದ್ದೇವೆ. ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರೂ ಭಾಗಿಯಾಗಿದ್ದಾರೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.
ಮುಖಂಡರಾದ ನಾಗೇಶ್ ಕುಂದಲ್ಪಾಡಿ, ಬಿ.ಕೆ.ಅರುಣ್‌ಕುಮಾರ್, ಸಜಿಲ್ ಕೃಷ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.