ನಾಪೋಕ್ಲು: ಹಾಂ..ಬಂತು.ಹಾಂ.. ಹೋಯಿತು. ಇದು ನಾಲ್ಕುನಾಡಿನ ಜನರ ಬಾಯಲ್ಲಿ ಕೇಳಿ ಬರುವ ಮಾತು.
ಮಳೆ-ಗಾಳಿಯ ಬಿರುಸು ಹೆಚ್ಚಿದಂತೆ ಇಲ್ಲಿ ವಿದ್ಯುತ್ ಮರೀಚಿಕೆಯಾಗಿದೆ. ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಕರೆಂಟು ಇಲ್ಲದೇ ಕತ್ತಲು ಆವರಿಸಿದೆ. ಕೆಲವು ಭಾಗಗಳಲ್ಲಿ ದಿನದ ಕೆಲವು ಅವಧಿ ಮಾತ್ರ ವಿದ್ಯುತ್ ಇದ್ದರೆ ಬಹುತೇಕ ಅವಧಿಯಲ್ಲಿ ಕಣ್ಣುಮುಚ್ಚಾಲೆ ಆಟ ಸಾಮಾನ್ಯ ಎನಿಸಿದೆ.
ಪ್ರತಿವರ್ಷ ಸಾಮಾನ್ಯವಾಗಿ ಜುಲೈ-ಆಗಸ್ಟ್ ತಿಂಗಳುಗಳಲ್ಲಿ ವಿದ್ಯುತ್ ಇಲ್ಲದೇ ಜನಸಾಮಾನ್ಯರು ಪರದಾಡುತ್ತಿದ್ದರು. ಪ್ರಸಕ್ತ ವರ್ಷ ಮೇ ತಿಂಗಳಿನಲ್ಲಿಯೇ ಮಳೆಯ ಅಬ್ಬರದಿಂದಾಗಿ ವಿದ್ಯುತ್ ಮರೀಚಿಕೆಯಾಗಿದೆ. ಸೆಸ್ಕ್ ಇಲಾಖೆಯ ಬೆರಳೆಣಿಕೆಯ ಸಿಬ್ಬಂದಿ ಸತತ ಶ್ರಮವಹಿಸಿದರೂ ಗ್ರಾಮೀಣ ಪ್ರಧೇಶಗಳಿಗೆ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಲ್ಲಲ್ಲಿ ಬುಡಕುಸಿದು, ರೆಂಬೆಮುರಿದು ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿದ್ದು ಪದೇಪದೇ ವಿದ್ಯುತ್ ಸಮಸ್ಯೆ ತಲೆದೋರುತ್ತಿದೆ. ಪ್ರತಿವರ್ಷದಂತೆ ಪರಿಹಾರ ಸಿಗದೇ ಗ್ರಾಹಕರು ಬಳಲುವಂತಾಗಿದೆ.
ಹತ್ತು ಹಲವು ವರ್ಷಗಳಿಂದ ನಾಗರಿಕರು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದು, ಪರಿಹಾರ ಇಲ್ಲ ಎನಿಸಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಮುಂಗಾರು ಪ್ರವೇಶಕ್ಕೂ ಮೊದಲೇ ಸೆಸ್ಕ್ ಇಲಾಖೆ ಸಿಬ್ಬಂದಿ ರಸ್ತೆಬದಿಗಳಲ್ಲಿ ಮತ್ತು ತೋಟಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಹೊಂದಿಕೊಂಡಿರುವ ಮರಗಳನ್ನು ತೆರವು ಗೊಳಿಸಬೇಕು. ಹಳೆಯ ಕಂಬಗಳನ್ನು ಬದಲಿಸಿ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಪೂರ್ವ ಸಿದ್ಧತೆಗಳನ್ನು ನಡೆಸಬೇಕು. ಆದರೆ, ನಾಪೋಕ್ಲು ವಿಭಾಗದಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಸಣ್ಣ ಮಳೆಗೆ ವಿದ್ಯುತ್ ಕಡಿತಗೊಂಡು ಜನರು ವಿದ್ಯುತ್ ಸಮಸ್ಯೆಯನ್ನು ಎದುರಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದು ನಾಗರಿಕರ ಆರೋಪ.
ಮಡಿಕೇರಿ ತಾಲ್ಲೂಕಿನಲ್ಲಿ 2ನೇ ಅತೀ ದೊಡ್ಡ ಪಟ್ಟಣವಾಗಿರುವ ನಾಪೋಕ್ಲು ದೊಡ್ಡ ಹೋಬಳಿಯಾಗಿದ್ದು, ಇಲ್ಲಿ ವಿದ್ಯುತ್ ವಿತರಣ ಕೇಂದ್ರ ಇಲ್ಲ. ಮೂರ್ನಾಡಿನಲ್ಲಿ ವಿದ್ಯುತ್ ಪೂರೈಕೆ ಕೇಂದ್ರ ಇದ್ದು, ಮಳೆಗಾಲದಲ್ಲಿ ಈ ವ್ಯಾಪ್ತಿಯಲ್ಲಿ ಯಾವುದೇ ಭಾಗದಲ್ಲಿ ಮರದ ಕೊಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದರೂ, ಪೂರ್ಣ ನಾಲ್ಕುನಾಡಿಗೆ ವಿದ್ಯುತ್ ಸಮಸ್ಯೆ ಕಾಡುತ್ತದೆ.
ಧಾರಾಕಾರ ಮಳೆಗೆ ಪ್ರವಾಹಕ್ಕೆ ತುತ್ತಾಗುವ ಚೆರಿಯಪರಂಬು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ತಂತಿಗಳು ಗದ್ದೆ ಮತ್ತು ತೋಟಗಳಲ್ಲಿ ಕಡಿಮೆ ಎತ್ತರದಲ್ಲಿ ಹಾದುಹೋಗಿವೆ. ಈ ತಂತಿಗಳು ಮಳೆಗಾಲದಲ್ಲಿ ಪ್ರವಾಹದಿಂದ ಬಹು ಬೇಗನೆ ಮುಳುಗಡೆಯಾಗುತ್ತಿದೆ.
ಇಲ್ಲಿನ ಗ್ರಾಮಸ್ಥರು ಪ್ರವಾಹ ಭೀತಿಯ ನಡುವೆಯೂ ಅದೆಷ್ಟೋ ದಿನಗಳು ಕತ್ತಲೆಯಲ್ಲಿ ಕಳೆಯುವ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಅಗಾಗ್ಗೆ ಬೀಸುವ ಗಾಳಿ-ಮಳೆಗೆ ಮರ ಹಾಗೂ ಮರದ ಕೊಂಬೆಗಳು ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಬಿದ್ದು, ಅವುಗಳು ತುಂಡಾಗಿ ನೆಲಕ್ಕುರುಳುತ್ತವೆ. ಇದರ ದುರಸ್ತಿಕಾರ್ಯವನ್ನು ನಿರ್ವಹಿಸುವುದು ಇಲ್ಲಿನ ಸೆಸ್ಕ್ ಕಚೇರಿಯಲ್ಲಿ ಬೆರಳೆಣಿಕೆಯ ಸಿಬ್ಬಂದಿಯಿಂದ ಸಾಧ್ಯವಾಗುತ್ತಿಲ್ಲ. ಇರುವ ಲೈನ್‌ಮೆನ್‌ಗಳು ಮಳೆ- ಚಳಿಯಲ್ಲಿ ಕಷ್ಟಪಟ್ಟು ದುರಸ್ತಿಗೆ ಮುಂದಾದರೂ, ಯಥಾಸ್ಥಿತಿಗೆ ಬರಲು ದಿನಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ಹಳ್ಳಿ ಪ್ರದೇಶಗಳ ಜನತೆ ವಾರಗಟ್ಟಲೆ ಕತ್ತಲೆಯಲ್ಲಿ ದಿನ ದೂಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಗ್ರಾಮೀಣ ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಈ ವರ್ಷ ಮೇ ತಿಂಗಳಿನಲ್ಲಿಯೇ ವಿದ್ಯುತ್ ಸಮಸ್ಯೆ ಸೃಷ್ಟಿಯಾಗಿದ್ದು ಹಳ್ಳಿಗಳಲ್ಲಿ ದಿನನಿತ್ಯ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಇದರಿಂದ ಗೃಹ ಬಳಕೆ ಎಲೆಕ್ಟ್ರಾನಿಕ್ಸ್ ಯಂತ್ರಗಳು ಕೆಟ್ಟುಹೋಗಿ ಜನರು ನಷ್ಟ ಅನುಭವಿಸುವಂತ್ತಾಗಿದೆ.
ಮೂರ್ನಾಡು-ನಾಪೋಕ್ಲು ನಡುವೆ ಎಕ್ಸ್ ಪ್ರೆಸ್ ಲೈನ್ ಅಳವಡಿಸಿದರೂ ಜನರ ವಿದ್ಯುತ್ ಬವಣೆ ನೀಗಿಲ್ಲ. ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕಾ ಕೇಂದ್ರವನ್ನು ಸ್ಥಾಪಿಸಬೇಕು, ಅದರಂತೆ ಕಚೇರಿಯಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ಈ ವ್ಯಾಪ್ತಿಯಲ್ಲಿ ಜನರು ಅನುಭವಿಸುತ್ತಿರುವ ನಿರಂತರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸಂಬಂಧಪಟ್ಟ ಸೆಸ್ಕ್ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು-ಎಂಬ ಜನರ ಕೋರಿಕೆಗೆ ಇದುವರೆಗೆ ಉತ್ತರ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.