ADVERTISEMENT

ನಾಪೋಕ್ಲು | SSLCಯಲ್ಲಿ ಶೇ 100 ಫಲಿತಾಂಶ ತರಲು ಶ್ರಮಿಸಿ: ಶಿಕ್ಷಣಾಧಿಕಾರಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 2:28 IST
Last Updated 24 ಆಗಸ್ಟ್ 2024, 2:28 IST
ನಾಪೋಕ್ಲು ಸಮೀಪದ ಮೂರ್ನಾಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ವಿಷಯ ಶಿಕ್ಷಕರ ವೇದಿಕೆ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಶಿಕ್ಷಕರು ಪಾಲ್ಗೊಂಡಿದ್ದರು
ನಾಪೋಕ್ಲು ಸಮೀಪದ ಮೂರ್ನಾಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ವಿಷಯ ಶಿಕ್ಷಕರ ವೇದಿಕೆ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಶಿಕ್ಷಕರು ಪಾಲ್ಗೊಂಡಿದ್ದರು   

ನಾಪೋಕ್ಲು: ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ತರಲು ವಿಷಯ ಶಿಕ್ಷಕರು ಈಗಿನಿಂದಲೇ ಕ್ರಮ ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ದೊಡ್ಡೇಗೌಡ ಹೇಳಿದರು.

ಗಣಿತ ವಿಷಯ ಶಿಕ್ಷಕರ ವೇದಿಕೆ ವತಿಯಿಂದ ಸಮೀಪದ ಮೂರ್ನಾಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಉತ್ತಮ ಫಲಿತಾಂಶ ತರಲು ಶಿಕ್ಷಕರ ಅವಿರತ ಶ್ರಮ ಅಗತ್ಯ. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ಗಣಿತ ಶಿಕ್ಷಕರಿಗೆ ಗೌರವದ ಸ್ಥಾನ ಇದೆ. ಗಣಿತ ವಿಷಯ ಕಲಿಕೆಯ ಭಯದಲ್ಲಿ ವಿದ್ಯಾರ್ಥಿಗಳು ಶಾಲೆ ಬಿಡುವಂತೆ ಆಗಬಾರದು. ಶಿಕ್ಷಣದ ಜೊತೆಗೆ ಜೀವನದ ಮುಖ್ಯವಾಹಿನಿಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸುವ ಜವಾಬ್ದಾರಿ ಶಿಕ್ಷಕರದ್ದು’ ಎಂದರು.

ADVERTISEMENT

ಬದಲಾದ ಕಾಲಘಟ್ಟದಲ್ಲಿ ಶಿಕ್ಷಕರು ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಬೇಕಾಗಿದೆ. ಶೈಕ್ಷಣಿಕ ವಲಯದಲ್ಲಿ ಗಣಿತ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ವೈಯಕ್ತಿಕವಾಗಿ ಆ ಮಕ್ಕಳ ಬಗ್ಗೆ ಗಮನಹರಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡಬೇಕಾದ್ದು ಶಿಕ್ಷಕರ ಜವಾಬ್ದಾರಿ’ ಎಂದರು.

ಕಾರ್ಯಾಗಾರದಲ್ಲಿ ಗೌಡಳ್ಳಿ ಪ್ರೌಢಶಾಲೆಯ ಸಹಶಿಕ್ಷಕ ದಿನೇಶ್ ಹಾಗೂ ಸೋಮವಾರಪೇಟೆಯ ಸಂತ ಜೋಸೆಫರ ಪ್ರೌಢಶಾಲೆಯ ಸಹ ಶಿಕ್ಷಕ ಹ್ಯೂಬರ್ಟ್ ಡಯಾಸ್ ಹತ್ತನೇ ತರಗತಿಯ ಬದಲಾದ ಪಠ್ಯಕ್ರಮದ ಬಗ್ಗೆ ವಿಶ್ಲೇಷಣೆ ನಡೆಸಿ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.

ಕನಿಷ್ಠ ಕಲಿಕೆಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಶಾಲಾ ಶಿಕ್ಷಣ ಇಲಾಖೆಯ ಇಸಿಒ ಹರೀಶ್, ಮೂರ್ನಾಡು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ.ಪಿ ಗುರುರಾಜ್, ಗಣಿತ ವಿಷಯ ಶಿಕ್ಷಕರ ವೇದಿಕೆಯ ಅಧ್ಯಕ್ಷ ಸುರೇಶ್, ಪದಾಧಿಕಾರಿಗಳಾದ ಎಚ್.ಎನ್.ಭಾರತಿ, ಸೌಮ್ಯಲತಾ, ಉಷಾ ಇದ್ದರು.

ತಾಲೂಕಿನ 32 ಶಾಲೆಗಳ ಗಣಿತ ಶಿಕ್ಷಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.