ADVERTISEMENT

ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ: ಕೆ.ಡಿ.ನೀತಾ

ರಾಷ್ಟ್ರೀಯ ವಿಜ್ಞಾನ ದಿನ: ಗಮನ ಸೆಳೆದ ವೈಜ್ಞಾನಿಕ ಪ್ರಯೋಗಗಳು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:17 IST
Last Updated 1 ಮಾರ್ಚ್ 2026, 8:17 IST
ನಾಪೋಕ್ಲುವಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಪ್ರಯೋಗ ಪ್ರದರ್ಶಿಸಿದರು
ನಾಪೋಕ್ಲುವಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಪ್ರಯೋಗ ಪ್ರದರ್ಶಿಸಿದರು   

ನಾಪೋಕ್ಲು: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಇಲ್ಲಿನ ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿ ಹಾಗೂ ವೈಜ್ಞಾನಿಕ ಪ್ರಯೋಗಗಳ ಸ್ಪರ್ಧೆ ಆಯೋಜಿಸಲಾಗಿತ್ತು.

6ರಿಂದ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಗಾಳಿಯಂತ್ರದ ರಚನೆ, ವಿದ್ಯುತ್ ಮಿತ ಬಳಕೆ, ಸೌರಶಕ್ತಿಯ ಬಳಕೆ ಕೃಷಿಗೆ ಹನಿ ನೀರಾವರಿ ವ್ಯವಸ್ಥೆ, ಆಮ್ಲ ಪ್ರತ್ಯಾಮ್ಲಗಳನ್ನು ಗುರುತಿಸುವಿಕೆ, ಜಾಗತಿಕ ತಾಪಮಾನ, ವಾಹನದಟ್ಟಣೆ ನಿಯಂತ್ರಿಸಲು ಸಂಕೇತಗಳು, ನೀರಿನ ಶುದ್ಧೀಕರಣ ವ್ಯವಸ್ಥೆ, ನಿತ್ಯ ಜೀವನದಲ್ಲಿ ವೈಜ್ಞಾನಿಕ ಸಲಕರಣೆಗಳ ಬಳಕೆ ಸೇರಿದಂತೆ ವಿವಿಧ ಪ್ರಯೋಗ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಗಮನ ಸೆಳೆದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಂಶುಪಾಲರಾದ ಕೆ.ಡಿ.ನೀತಾ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬಳಸಿಕೊಳ್ಳಬೇಕು. ಕೇವಲ ಪರೀಕ್ಷೆಗಾಗಿ ಕಲಿಕೆ ಆಗಬಾರದು. ದೈನಂದಿನ ವ್ಯವಹಾರಗಳಲ್ಲಿ ವಿಜ್ಞಾನದ ವಿಷಯಗಳ ಬಗ್ಗೆ ಪ್ರಾಯೋಗಿಕ ಮಾಹಿತಿ ಹೊಂದಿರಬೇಕು ಎಂದರು.

ವಿಜ್ಞಾನ ಶಿಕ್ಷಕಿ ರೇಷ್ಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ.ರಾಮನ್ ಬೆಳಕಿನ ಚದುರುವಿಕೆ ಒಳಗೊಂಡ ರಾಮನ್ ಪರಿಣಾಮ ಕಂಡುಹಿಡಿದ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ದಿನನಿತ್ಯದ ವಿಜ್ಞಾನ ಕುರಿತು ಕುತೂಹಲ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನೇತಾಜಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎಸ್.ಸುರೇಶ್ ಮಾತನಾಡಿ, ವೈಜ್ಞಾನಿಕ ಸಂಶೋಧನೆಗಳು ಜಗತ್ತಿನ ಪಥ ಬದಲಿಸಿವೆ. ಸರ್ ಸಿ.ವಿ.ರಾಮನ್ ಸಂಶೋಧಿಸಿದ ರಾಮನ್ ಪರಿಣಾಮ ವೈಜ್ಞಾನಿಕ ಕ್ಷೇತ್ರಕ್ಕೆ ನೀಡಿದ ಬಹಳ ದೊಡ್ಡ ಕೊಡುಗೆಯಾಗಿದೆ. ರಾಂಟೆಜನ್ ಸಂಶೋಧಿಸಿದ ಕ್ಷ-ಕಿರಣ ಕೂಡ ವೈದ್ಯಕೀಯ ಕ್ಷೇತ್ರದ ಮಹತ್ತಮ ಕೊಡುಗೆಯಾಗಿದೆ. ಇಂತಹ ನೂರಾರು ಸಂಶೋಧನೆಗಳು ಜಗತ್ತು ಬದಲಾಗುವಂತೆ ಮಾಡಿದೆ ಎಂದರು.

ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಿಕ್ಷಕರಾದ ಬಿ.ಲಕ್ಷ್ಮಣ, ಕೆ.ಯು.ಸುಶ್ಮಿತಾ, ಯಜ್ಞ, ಕವಿತಾ, ರೂಪಾ, ಛಾಯಾ, ಸುಧಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.