ಸುಂಟಿಕೊಪ್ಪ: ದೇಶ ಮೊದಲು ಎಂಬ ಭಾವನೆಯಿಂದ ನಾವೆಲ್ಲರೂ ಒಂದಾಗಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್‌ಕುಮಾರ್ ಹೇಳಿದರು.
ಸುಂಟಿಕೊಪ್ಪ ಆಟೊ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಬುಧವಾರ ನಡೆದ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವೆಲ್ಲರೂ ಮೊದಲಿಗೆ ಮನುಷ್ಯರೆಂದು ಅರ್ಥ ಮಾಡಿಕೊಂಡು ಮನುಷ್ಯ ಧರ್ಮವನ್ನು ಪಾಲಿಸಬೇಕು. ನಾವು ಪ್ರಪಂಚವನ್ನು ಬಿಟ್ಟು ಹೋಗುವ ಮೊದಲು ಎಷ್ಟರ ಮಟ್ಟಿಗೆ ಮನುಷ್ಯ ಧರ್ಮವನ್ನು ಪಾಲಿದ್ದೇವೆ ಎಂಬುದನ್ನು ಆರಿಯುವ ಪ್ರಯತ್ನವನ್ನು ಮಾಡಬೇಕು. ಚಾಲಕರು ಮಾನವೀಯತೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದು, ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ, ಹಿಂದೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಥವಾ ಯಾವುದೇ ಜನಾಂಗದವರಾಗಲಿ ತಾವು ಆಚರಿಸುವ ಧಾರ್ಮಿಕ ಆಚರಣೆ ಮತ್ತು ಹಬ್ಬ ಹರಿದಿನಗಳ ಕುರಿತು ನಮ್ಮಲ್ಲಿ ಮಾಹಿತಿ ಮತ್ತು ತಿಳಿವಳಿಕೆ ಇರಬೇಕು. ಮಕ್ಕಳಿಗೆ ಬಾಲ್ಯವಸ್ಥೆಯಲ್ಲಿಯೇ ನಮ್ಮ ನಮ್ಮ ಧಾರ್ಮಿಕ ಆಚರಣೆ ಮತ್ತು ಹಬ್ಬ ಹರಿದಿನಗಳ ಬಗ್ಗೆ ಮಾಹಿತಿ ಮತ್ತು ಮಹತ್ವ ತಿಳಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಸುಂಟಿಕೊಪ್ಪ ಸಿಎಸ್‌ಐ ಇಮಾನ್ಯುವೆಲ್ ದೇವಾಲಯದ ಧರ್ಮಗುರುಗಳಾದ ಮಧುಕಿರಣ್ ಮಾತನಾಡಿದರು.
ಹಮೀದ್ ಮೌಲವಿ ಮಾತನಾಡಿ, ದೇಶದಲ್ಲಿ ಶಾಂತಿಯ ಬದಲಾಗಿ ಇತ್ತೀಚಿನ ದಿನಗಳಲ್ಲಿ ಅಶಾಂತಿ ತಾಂಡವಾಡುತ್ತಿದೆ. ಇದಕ್ಕೆ ಕಾರಣ ಯುವ ಜನಾಂಗ ತಮ್ಮ ಧರ್ಮದ ಧರ್ಮಗ್ರಂಥಗಳಲ್ಲಿರುವ ವಿಷಯವನ್ನು ಅರ್ಥ ಮಾಡಿಕೊಳ್ಳದೇ ಇರುವುದು. ಹಿರಿಯರು ಮಕ್ಕಳಿಗೆ ಈ ವಿಷಯ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿಡಿಸೋಜ, ಪಿಡಿಒ ವಿ.ಜಿ.ಲೋಕೇಶ್, ಸದಸ್ಯರಾದ ಪ್ರಸಾದ್‌ಕುಟ್ಟಪ್ಪ, ಶಬೀರ್ ಹಾಗೂ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅದ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ವಹಿಸಿದ್ದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಪಿ.ಎಫ್.ಸಬಾಸ್ಟೀನ್, ಸೋಮನಾಥ್, ರಫೀಕ್ ಖಾನ್, ಶಾಂತಿ, ವಸಂತಿ, ಮಂಜುಳಾ (ರಾಸಥಿ), ಆಟೊ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎ.ಎಂ.ಶರೀಫ್, ಉದ್ಯಮಿ ವಿಲಿಯಂ, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಉಪಾಧ್ಯಕ್ಷ ಅವಲಕುಟ್ಟಿ, ಕಾರ್ಯದರ್ಶಿ ಮುನೀರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಸುಂಟಿಕೊಪ್ಪದ ಪ್ರತಿಭಾನ್ಚಿತ ವಾಗ್ಮಿ ಶ್ರೀಶಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.