ADVERTISEMENT

ಗಂಗಾವರ ಅರಣ್ಯದಲ್ಲಿ ‘ಪ್ರಕೃತಿ ಅರಿವು’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 19:45 IST
Last Updated 14 ಡಿಸೆಂಬರ್ 2019, 19:45 IST
ಶನಿವಾರಸಂತೆ ಸಮೀಪದ ಅಂಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನಿರ್ಮಲಾ ಇಕೊ ಕ್ಲಬ್, ರೋಟರಿ ಇಂಟರ್ ಆ್ಯಕ್ಟ್ ,ಗ್ರಾಹಕರ ಕ್ಲಬ್,ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಗಂಗಾವರ ಅರಣ್ಯಕ್ಕೆ ಎತ್ತಿನಗಾಡಿ ಜಾಥಾದಲ್ಲಿ ಸಾಗಿದರು
ಶನಿವಾರಸಂತೆ ಸಮೀಪದ ಅಂಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನಿರ್ಮಲಾ ಇಕೊ ಕ್ಲಬ್, ರೋಟರಿ ಇಂಟರ್ ಆ್ಯಕ್ಟ್ ,ಗ್ರಾಹಕರ ಕ್ಲಬ್,ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಗಂಗಾವರ ಅರಣ್ಯಕ್ಕೆ ಎತ್ತಿನಗಾಡಿ ಜಾಥಾದಲ್ಲಿ ಸಾಗಿದರು   

ಶನಿವಾರಸಂತೆ: ಸಮೀಪದ ಅಂಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗಾಗಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ನಿರ್ಮಲಾ ಇಕೋ ಕ್ಲಬ್, ರೋಟರಿ ಇಂಟರ‍್ಯಾಕ್ಟ್, ಗ್ರಾಹಕರ ಕ್ಲಬ್, ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಗಂಗಾವರ ಅರಣ್ಯದಲ್ಲಿ ’ಪ್ರಕೃತಿ ಅರಿವು’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಶಾಲೆಯಿಂದ ಅರಣ್ಯಕ್ಕೆ 63 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಮ್ಮಳ್ಳಿ ಗ್ರಾಮದ ಸಂಪತ್ತು ಮತ್ತು ತಂಡದವರ 7 ಎತ್ತಿನಗಾಡಿಗಳ ಜಾಥಾದಲ್ಲಿ ಪಾಲ್ಗೊಂಡಿದ್ದರು. ಅರಣ್ಯದ ಹಸಿರು ಮರಗಿಡಗಳ ನಡುವೆ ಪ್ರಕೃತಿ ಅರಿವು ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಅಲ್ಲಿ ವನಭೋಜನದ ಸವಿಯನ್ನೂ ಸವಿದರು.

ADVERTISEMENT

ಮುಖ್ಯಶಿಕ್ಷಕ ಹೇಮಂತ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲೇ ಜನಿಸಿದ್ದರೂ ಮಕ್ಕಳಿಗೆ ಪ್ರಕೃತಿ, ಪರಿಸರ, ಅರಣ್ಯದ ಅರಿವು ಅಷ್ಟಾಗಿ ಇರುವುದಿಲ್ಲ. ಎತ್ತಿನಗಾಡಿಯಲ್ಲಿ ಪ್ರಯಾಣಿಸಿರುವುದಿಲ್ಲ. ಹಾಗಾಗಿ, ಅವುಗಳ ಅರಿವು ಮೂಡಿಸುವ ದೃಷ್ಟಿಯಿಂದ ಎತ್ತಿನಗಾಡಿ ಜಾಥಾ, ಅರಣ್ಯದ ಪ್ರಶಾಂತ ವಾತಾವರಣದಲ್ಲಿ ಪ್ರಕೃತಿ ಆರಾಧನೆ ಹಾಗೂ ವನಭೋಜನ ಹಮ್ಮಿಕೊಳ್ಳಲಾಗಿದೆ. ಜೀವನದಲ್ಲಿ ಮೇಲುಗೈ ಸಾಧಿಸುವುದು ಪ್ರಕೃತಿ–ಉಳಿಸಿ, ವೃದ್ಧಿಸುವುದು ಮನುಕುಲದ ಧರ್ಮ ಎಂದರು.

ಶನಿವಾರಸಂತೆ ರೋಟರಿ ಸಂಸ್ಥೆ ಅಧ್ಯಕ್ಷ ಎಸ್.ವಿ.ಶುಭು ಮಾತನಾಡಿ, ಮಕ್ಕಳಿಗೆ ವಿದ್ಯೆಯ ಜತೆಯಲ್ಲಿಯೇ ಅರಣ್ಯ, ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕು. ಅರಣ್ಯದಿಂದಲೇ ಮಳೆ, ಬೆಳೆ ಹಾಗೂ ರೈತರ ನೆಮ್ಮದಿಯ ಬದುಕು ಎಂಬ ಸತ್ಯದ ಅರಿವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಮಲ್ಲಿಕಾರ್ಜುನ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿದರು.

ಅರಣ್ಯ ಇಲಾಖೆ ಸಿಬ್ಬಂದಿ ಪ್ರಶಾಂತ್, ಜಯಕುಮಾರ್, ಲೋಹಿತ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಗಣೇಶ್, ಗೀತಾ, ಶಿಕ್ಷಕರಾದ ಪ್ರವೀಣ್ ಕಾಮತ್, ರಮೇಶ್, ರವಿಕುಮಾರ್, ರಾಧಾಮಣಿ, ರೋಟರಿ ಸಂಸ್ಥೆ ಮೋನಿಕಾ ಶುಭು, ಗ್ರಾಮದ ಮುಖಂಡ ಧರ್ಮಪ್ಪ, ಮಂಜುನಾಥ್, ಸಂಪತ್ ಕುಮಾರ್, ದೇವೇಗೌಡ, ಕೇಶವೇಗೌಡ, ಗಂಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.