ADVERTISEMENT

ಎನ್‌ಡಿಆರ್‌ಎಫ್‌ನಿಂದ ಸಿಕ್ಕಿದ್ದು ಕೇವಲ ₹ 52 ಕೋಟಿ!

2018ರಲ್ಲೂ ಕೊಡಗಿನ ಕಾಫಿ ಬೆಳೆಗಾರರಿಗೆ ಬಿಡಿಗಾಸಿನ ಪರಿಹಾರ

ಅದಿತ್ಯ ಕೆ.ಎ.
Published 16 ಆಗಸ್ಟ್ 2019, 20:15 IST
Last Updated 16 ಆಗಸ್ಟ್ 2019, 20:15 IST
ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಳೆದ ವರ್ಷ ಭೂಕುಸಿತದಿಂದ ನಾಶವಾಗಿದ್ದ ಕಾಫಿ ತೋಟ
ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಳೆದ ವರ್ಷ ಭೂಕುಸಿತದಿಂದ ನಾಶವಾಗಿದ್ದ ಕಾಫಿ ತೋಟ   

ಮಡಿಕೇರಿ: ಕಳೆದ ವರ್ಷ ಕೇಂದ್ರ ಸರ್ಕಾರವು ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ’ಯಿಂದ ಬಿಡುಗಡೆ ಮಾಡಿದ್ದ ಅನುದಾನದಲ್ಲಿ, ಕೊಡಗಿಗೆ ಬೆಳೆ ಹಾನಿ ಪರಿಹಾರಕ್ಕೆ ಇದುವರೆಗೂ ಸಿಕ್ಕಿದ್ದು ಅಂದಾಜು ₹ 52 ಕೋಟಿ ಮಾತ್ರ!

2018ರಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಅತಿವೃಷ್ಟಿಗೆ ತುತ್ತಾಗಿದ್ದವು. ಅದರಲ್ಲೂ ಕೊಡಗಿನಲ್ಲಿ ಕಾಫಿ ತೋಟಗಳು ಭೂಕುಸಿತದಿಂದ ನಾಶವಾಗಿದ್ದವು. ವೈಯಕ್ತಿಕವಾಗಿ ಕಾಫಿ ಬೆಳೆಗಾರರಿಗೂ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು. ಜಿಲ್ಲೆಗೆ ಬಂದಿದ್ದ ಅಧ್ಯಯನ ತಂಡವೂ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಹೀಗಾಗಿ, ಬೆಳೆಗಾರರೂ ‘ವಿಶೇಷ ಪ್ಯಾಕೇಜ್‌’ ನಿರೀಕ್ಷೆಯಲ್ಲಿದ್ದರು. ಆದರೆ, ಕೇಂದ್ರ ಸರ್ಕಾರವು ಐದೂ ಜಿಲ್ಲೆಗಳಿಗೆ ಸೇರಿ ₹ 546 ಕೋಟಿ ಘೋಷಣೆ ಮಾಡುವ ಮೂಲಕ ಕೃಷಿಕರನ್ನು ನಿರಾಸೆಗೊಳಿಸಿತ್ತು.

‘ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಕೇಂದ್ರ ಸರ್ಕಾರವು ಕಡಿಮೆ ಮೊತ್ತದ ಪರಿಹಾರ ನೀಡಿ ಕೈತೊಳೆದುಕೊಂಡಿತು’ ಎಂಬುದು ಕೃಷಿಕರ ಆರೋಪ.ಸಿಕ್ಕ ಅಲ್ಪಸ್ವಲ್ಪ ಪರಿಹಾರದ ಹಣದಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿದ್ದ ಬೆಳೆಗಾರರಿಗೆ, ಮತ್ತೆ ಭಾರೀ ಮಳೆ ಸುರಿದು ಗಾಯದ ಮೇಲೆ ಬರೆ ಎಳೆದಿದೆ ಎಂಬುದು ಅವರ ನೋವು.

ADVERTISEMENT

‘ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಎಷ್ಟೇ ಪ್ರಮಾಣದಲ್ಲಿ ಬೆಳೆ ಹಾನಿ, ಭೂಕುಸಿತ ಸಂಭವಿಸಿದ್ದರೂ ಎರಡೂವರೆ ಹೆಕ್ಟೇರ್‌ಗೆ ಮಾತ್ರ ಪರಿಹಾರ ನೀಡಲು ಸಾಧ್ಯ. ಪ್ರತಿ ರೈತನಿಗೆ ಗರಿಷ್ಠ ಅಂದರೆ ₹ 36 ಸಾವಿರ ಪರಿಹಾರ ಲಭಿಸಿದೆ. ಗದ್ದೆಯಲ್ಲಿ ಹೂಳು ತುಂಬಿದ್ದರೆ ಅಂತಹ ರೈತರಿಗೆ, ಗರಿಷ್ಠ ₹ 6,500 ಪರಿಹಾರ ವಿತರಿಸಲಾಗಿದೆ. ರೈತರಿಂದ ಬಂದ ಅರ್ಜಿಗಳನ್ನು ಪರಿಹಾರ ತಂತ್ರಾಂಶಕ್ಕೆ ಅಳವಡಿಸುವುದಷ್ಟೇ ನಮ್ಮ ಕೆಲಸ. ರೈತರ ಖಾತೆಗೇ ನೇರವಾಗಿ ಪರಿಹಾರದ ಹಣವು ಸಂದಾಯವಾಗಿದೆ’ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಕಳೆದ ವರ್ಷ ಭೂಕುಸಿತದಿಂದ 2,631 ಎಕರೆ ಕಾಫಿ ತೋಟ ನಾಶವಾಗಿತ್ತು. 41 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಉಂಟಾಗಿತ್ತು. ಬೆಳೆಹಾನಿ, ಭೂಕುಸಿತ ಹಾಗೂ ಹೂಳು ತುಂಬಿದ್ದ ಗದ್ದೆಗಳಿಗೆ ಪರಿಹಾರವಾಗಿ, 34,955 ರೈತರಿಗೆ ಮೊದಲ ಹಂತದಲ್ಲಿ ₹ 47.96 ಕೋಟಿ ಪರಿಹಾರ ವಿತರಿಸಲಾಗಿದೆ. ಒಂದು ತಿಂಗಳ ಹಿಂದಷ್ಟೇ ಮತ್ತೆ ₹ 5 ಕೋಟಿಯಷ್ಟು ಪರಿಹಾರವು ವಿವಿಧ ರೈತರ ಬ್ಯಾಂಕ್‌ ಖಾತೆಗೆ ಸಂದಾಯವಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದಿದ್ದ ಹಣವನ್ನು ಸಂತ್ರಸ್ತರ ಮನೆ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದೂ ಅವರು ಮಾಹಿತಿ ನೀಡಿದರು.

ಅದೇ ಸಂಕಷ್ಟ

ಈ ವರ್ಷವೂ ಕೊಡಗಿನಲ್ಲಿ ಮಳೆಯಿಂದ ₹ 579 ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. 1.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ, ಕಾಳುಮೆಣಸು, ಏಲಕ್ಕಿ, ಬಾಳೆ, ಶುಂಠಿ ಬೆಳೆ ಅತಿವೃಷ್ಟಿಗೆ ತುತ್ತಾಗಿದೆ. ಅದರಲ್ಲಿ 1 ಲಕ್ಷ ಹೆಕ್ಟೇರ್‌ನಷ್ಟು ಕಾಫಿ ಫಸಲು, 6,350 ಹೆಕ್ಟೇರ್‌ನಷ್ಟು ಕಾಳು ಮೆಣಸು ಬೆಳೆಗೆ ಹಾನಿಯಾಗಿದೆ.

ಭೂಕುಸಿತ: ಗರಿಷ್ಠ ₹ 36 ಸಾವಿರ ಮಾತ್ರ ಪರಿಹಾರ

ಗದ್ದೆಯಲ್ಲಿ ಹೂಳು ತುಂಬಿದ್ದರೆ ₹ 6,500

2018ರಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 34,955 ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.