ಸಿದ್ದಾಪುರ: ಮೈಸೂರು ರಸ್ತೆಯ ಟೀಕ್ ವುಡ್ ಕಾಫಿ ತೋಟದಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಕಾರ್ಮಿಕರಿಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಗುಹ್ಯ, ಕರಡಿಗೋಡು, ಇಂಜಲಗರೆ, ಅಭ್ಯತ್ ಮಂಗಲ, ಬೀಟಿಕಾಡು ವ್ಯಾಪ್ತಿಯಲ್ಲಿ ಕಾಡಾನೆ ಹಿಂಡುಗಳು ಬೀಡುಬಿಟ್ಟಿದ್ದು, ತೋಟದಿಂದ ತೋಟಕ್ಕೆ ಸಂಚರಿಸುತ್ತಿದೆ.
ಶನಿವಾರ ಬೆಳಿಗ್ಗೆ ಮೈಸೂರು ರಸ್ತೆಯಿಂದ ಕರಡಿಗೋಡು ರಸ್ತೆಗೆ ಸಂಚರಿಸುವ ರಸ್ತೆಯಲ್ಲಿರುವ ಟೀಕ್ ವುಡ್ ತೋಟದಲ್ಲಿ 6 ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಈ ಸಂದರ್ಭ ಕಾರ್ಮಿಕರು ಕಾಫಿ ತೋಟದಲ್ಲೇ ಕೆಲಸ ಮಾಡುತ್ತಿದ್ದು, ಕಾಡಾನೆಯನ್ನು ಕಂಡು ಭಯಭೀತರಾಗಿ ಓಡಿದ್ದಾರೆ.
ಇದೇ ಸಂದರ್ಭ ಕಾರ್ಮಿಕರೊಬ್ಬರು ರಸ್ತೆಯ ಮೂಲಕ ಓಡಲು ಪ್ರಯತ್ನಿಸಿದ ಸಂದರ್ಭ ಕಾಡಾನೆ ದಾಳಿ ನಡೆಸಲು ಮುಂದಾಗಿದೆ. ಈ ಸಂದರ್ಭ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಕಾರ್ಮಿಕ ಪಾರಾಗಿದ್ದಾರೆ.
ಸಮೀಪದ ಹೆರೂರು ಎಸ್ಟೇಟ್, ಕರಡಿಕಾಡು ಎಸ್ಟೇಟ್‌ಗಳಲ್ಲೂ ಕಾಡಾನೆ ಹಿಂಡು ಓಡಾಡುತ್ತಿದ್ದು, ಕಾರ್ಮಿಕರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗೇಟ್ ಮುರಿದ ಕಾಡಾನೆ: ಟೀಕ್‌ವುಡ್ ತೋಟದಲ್ಲಿ ಕಳೆದ ಕೆಲವು ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆ ಹಿಂಡುಗಳು ಕಾಫಿ ತೋಟದಲ್ಲಿ ದಾಂಧಲೆ ನಡೆಸುತ್ತಿದೆ.
ರಾತ್ರಿ ವೇಳೆಯಲ್ಲಿ ಮನೆ ಹಾಗೂ ತೋಟದ ಲೈನ್‌ಮನೆಗಳ ಬಳಿಗೆ ಬರುವ ಕಾಡಾನೆಗಳು ಬೆಳೆಗಳು ಹಾಗೂ ಮನೆಗಳಿಗೆ ಹಾನಿ ಮಾಡುತ್ತಿದೆ. ಟೀಕ್‌ವುಡ್ ತೋಟದ ಗೇಟನ್ನು ತುಳಿದು ಹಾನಿ ಪಡಿಸಿವೆ.
ಆರ್‌ಆರ್‌ಟಿ ಗ್ರೂಪ್‌ನಲ್ಲಿ ದೂರುಗಳು: ಅರಣ್ಯ ಇಲಾಖೆಯು ಕಾಡಾನೆಗಳು ಸೇರಿದಂತೆ ವನ್ಯಮೃಗಗಳ ದಾಳಿಯಿಂದ ನಾಗರಿಕರನ್ನು ರಕ್ಷಿಸಲು ಹಾಗೂ ತ್ವರಿತ ಸ್ಪಂದನೆಗೆ ರ‍್ಯಾಪಿಡ್ ರೆಸ್ಪಾನ್ಸ್ ಟೀಂ (ಆರ್.ಆರ್.ಟಿ) ತಂಡವನ್ನು ರಚಿಸಿದ್ದು, ಕಾಡಾನೆಗಳು ಇರುವ ಪ್ರದೇಶಕ್ಕೆ ತಂಡ ಭೇಟಿ ನೀಡುತ್ತಿದೆ. ಸಾರ್ವಜನಿಕರ ಸಹಾಯಕ್ಕಾಗಿ ವಾಟ್ಸ್ ಆ್ಯಪ್ ಗ್ರೂಪ್ ಆರಂಭಿಸಿದ್ದು, ಗ್ರೂಪ್‌ನಲ್ಲಿ ಪ್ರತಿದಿನವೂ ಕಾಡಾನೆ ಇರುವ ಬಗ್ಗೆ ಹಾಗೂ ಹಾನಿಪಡಿಸಿರುವ ಬಗ್ಗೆ ದೂರು ಬರುತ್ತಿದೆ.
ಸಿದ್ದಾಪುರ, ಗುಹ್ಯ, ಕಣ್ಣಂಗಾಲ, ಬೈರಂಬಾಡ, ಪಾಲಿಬೆಟ್ಟ ವ್ಯಾಪ್ತಿಯಿಂದ ಹೆಚ್ಚು ದೂರು ಕೇಳಿಬರುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ. ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟಿದ್ದರೂ, ಮರಳಿ ತೋಟಗಳಿಗೆ ಬರುತ್ತಿವೆ ಎಂದು ಸ್ಥಳೀಯರು ನೋವು ತೋಡಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.