ADVERTISEMENT

ಕೊಡಗು: ಲೋಹದ ಏಣಿ, ಜೀವಕ್ಕೇ ಕುತ್ತು

ನಾಲ್ಕು ವರ್ಷದಲ್ಲಿ 30 ಕಾರ್ಮಿಕರ ಸಾವು

ವಿಕಾಸ್ ಬಿ.ಪೂಜಾರಿ
Published 8 ಜೂನ್ 2019, 19:30 IST
Last Updated 8 ಜೂನ್ 2019, 19:30 IST
ಕಾರ್ಮಿಕರ ಜೀವಕ್ಕೆ ಕಂಟಕವಾಗಿರುವ ಲೋಹದ ಏಣಿಗಳು
ಕಾರ್ಮಿಕರ ಜೀವಕ್ಕೆ ಕಂಟಕವಾಗಿರುವ ಲೋಹದ ಏಣಿಗಳು   

ಮಡಿಕೇರಿ: ‘ಅಲ್ಯುಮಿನಿಯಂ ಏಣಿ’ಯೇ ಈ ಭಾಗದ ಕೃಷಿ ಕಾರ್ಮಿಕರ ಪಾಲಿಗೆ ಯಮಪಾಶವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ತೋಟದ ಮಧ್ಯೆ ಹಾದುಹೋಗಿರುವ ವಿದ್ಯುತ್‌ ತಂತಿಗೆ ‘ಅಲ್ಯುಮಿನಿಯಂ ಏಣಿ’ ತಗುಲಿ ಕಳೆದ ನಾಲ್ಕು ವರ್ಷದಲ್ಲಿ ಜಿಲ್ಲೆಯಲ್ಲಿ 30 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಇದೀಗ ಜಿಲ್ಲಾಡಳಿತ ಎಚ್ಚೆತ್ತು ಈ ಏಣಿ ಬಳಸದಂತೆ ಮನವಿ ಮಾಡಿಕೊಂಡಿದೆ. ತೋಟ ಕಾರ್ಮಿಕರ ಜೀವಕ್ಕೆ ಸಂಚಕಾರ ತರುವ ಏಣಿಗಳನ್ನು ಬಳಸದಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಕಾಳುಮೆಣಸು, ಮರಗಳ ರೆಂಬೆ ಕತ್ತರಿಸಲು ಅಲ್ಯುಮಿನಿಯಂ ಏಣಿಗಳನ್ನೇ ಬಳಸಲಾಗುತ್ತಿದೆ. ಕಾರ್ಮಿಕರು ತೋಟದಲ್ಲಿ ಏಣಿ ಹೊತ್ತು ಸಾಗುವ ಸಂದರ್ಭದಲ್ಲಿ ವಿದ್ಯುತ್ ತಂತಿಗಳ ಅರಿವಿಲ್ಲದೇ ಅಥವಾ ಬಾಗಿ ನಿಂತಿರುವ ವಿದ್ಯುತ್ ತಂತಿಗಳು ಏಣಿಗೆ ಸ್ಪರ್ಶಿಸಿ ಸ್ಥಳದಲ್ಲಿ ಸಾವನ್ನಪ್ಪುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ.

ADVERTISEMENT

ವಿರಾಜಪೇಟೆ ತಾಲ್ಲೂಕಿನ ಅರ್ವತ್ತೋಕ್ಲುವಿನಲ್ಲಿ ತಿಂಗಳ ಹಿಂದೆ ‘ಅಲ್ಯುಮಿನಿಯಂ ಏಣಿ’ ಬಳಸಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಸ್ಥಳದಲ್ಲೇ ಮೂವರು ಕಾರ್ಮಿಕರು ಮೃತಪಟ್ಟಿದ್ದರು.

ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಪುಲಿಕೋಟು ಗ್ರಾಮದಲ್ಲಿ ಮರದ ರೆಂಬೆ ಕಡಿಯುವಾಗ ಮೂವರು ಕಾರ್ಮಿಕರು ಜೀವ ಕಳೆದುಕೊಂಡಿದ್ದರು.

ಏಣಿ ಹಗುರ ಹೆಚ್ಚು ಬಳಕೆ:ಅಲ್ಯುಮಿನಿಯಂ ಏಣಿ ಹಗುರವಾಗಿರುವ ಕಾರಣಕ್ಕೆ ಕಾರ್ಮಿಕರು ಹೆಚ್ಚಾಗಿ ತೋಟದಲ್ಲಿ ಇದನ್ನೇ ಬಳಸುತ್ತಾರೆ. ಬಿದಿರು, ಮರ ಅಥವಾ ಇತರೆ ಏಣಿಗಳಿಗೆ ಹೋಲಿಸಿದರೆ ಅಲ್ಯುಮಿನಿಯಂ ಏಣಿಗಳು ಗಟ್ಟಿ, ಬಾಳಿಕೆಯೂ ಹೆಚ್ಚು ಎನ್ನುವ ಕಾರಣಕ್ಕೆ ಬೆಳೆಗಾರರು ಲೋಹದ ಏಣಿಯ ಮೊರೆ ಹೋಗಿದ್ದಾರೆ.

ಬಿದಿರು, ಮರದ ಏಣಿಗಳ ಕಾಲುಗಳು ಬಲ ಇರುವುದಿಲ್ಲ. ಜತೆಗೆ, ಭಾರವು ಹೆಚ್ಚಾಗಿರುವುದರಿಂದ ತೋಟದ ಮಾಲೀಕರು, ಕಾರ್ಮಿಕರು ಇದರ ಬಳಕೆಗೆ ಆಸಕ್ತಿ ವಹಿಸುತ್ತಿಲ್ಲ. ಆದರೆ, ಜಿಲ್ಲಾಡಳಿತ ಮಾತ್ರ ಅಸುರಕ್ಷಿತ ಏಣಿ ಬಳಸಬೇಡಿ ಎಂದು ಎಚ್ಚರಿಕೆ ನೀಡಿದೆ.

ಬಿದಿರಿನ ಏಣಿ ಸುರಕ್ಷಿತ:ಬಿದಿರನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಬಳಕೆ ಮಾಡಿದರೆ ವಿದ್ಯುತ್ ಸ್ಪರ್ಶಿಸುವುದಿಲ್ಲ. ಬಿದಿರು ಒಣಗಿರುವುದರಿಂದ ಯಾವುದೇ ರೀತಿಯ ವಿದ್ಯುತ್ ಪ್ರವಹಿಸುವುದಿಲ್ಲ. ಆದರೆ, ಈಚೆಗೆ ಜಿಲ್ಲೆಯಲ್ಲಿ ಬಿದಿರಿನ ಪ್ರಮಾಣ ಕಡಿಮೆವಿರುವುದರಿಂದ ಏಣಿಗಳು ಲಭ್ಯವಾಗುತ್ತಿಲ್ಲ ಎಂದು ಕಾರ್ಮಿಕರೊಬ್ಬರು ಹೇಳುತ್ತಾರೆ.

ಜಿಲ್ಲೆಯಲ್ಲಿ ಹೆಚ್ಚು ಕಾಫಿ, ಕರಿ ಮೆಣಸು ತೋಟಗಳ ನಡುವೆಯೇ ವಿದ್ಯುತ್‌ ಲೈನ್‌ ಹಾದು ಹೋಗಿವೆ. ಕಾರ್ಮಿಕರ ಸಾವು ಹೆಚ್ಚುತ್ತಿರುವ ಪರಿಣಾಮವಾಗಿ ವಿದ್ಯುತ್ ಸರಬರಾಜು ಇಲಾಖೆ ಕೂಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮತ್ತು ಗ್ರಾಮ ಸಭೆಗಳನ್ನು ನಡೆಸಿ ಅಲ್ಯುಮಿನಿಯಂ ಏಣಿ ಬಳಕೆಯಿಂದ ಉಂಟಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ಇನ್ನು ಮರಗಳ ರೆಂಬೆ- ಕೊಂಬೆಗಳ ಬೀಳುವಿಕೆಯಿಂದ ಕಂಬಗಳು ಭಾಗಿ, ತಂತಿಗಳು ಕೆಳಮಟ್ಟಕ್ಕಿಳಿದು ವಿದ್ಯುತ್‌ ಆಘಾತಗಳಾಗುವ ಸಂಭವವಿರುತ್ತದೆ. ಆದ್ದರಿಂದ, ಅಪಾಯ ಮಟ್ಟದಲ್ಲಿರುವ ವಿದ್ಯುತ್ ತಂತಿಗಳು, ಶಿಥಿಲಗೊಂಡಿರುವ ಕಂಬಗಳು ಕಂಡು ಬಂದರೆ ಸೆಸ್ಕ್ ಕಚೇರಿ ಅಥವಾ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಬಹುದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.