ADVERTISEMENT

ವಿದ್ಯುತ್ ಅವಘಡ: ಮೂವರು ಕಾರ್ಮಿಕರ ಸಾವು

ತೆಂಗಿನ ಕಾಯಿ ಕೊಯ್ಲು ಮಾಡುವಾಗ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 14:37 IST
Last Updated 1 ಏಪ್ರಿಲ್ 2019, 14:37 IST
ಮೂವರು ಕಾರ್ಮಿಕರನ್ನು ಬಲಿ ಪಡೆದ ಅಲ್ಯುಮಿನಿಯಂ ಏಣಿ  
ಮೂವರು ಕಾರ್ಮಿಕರನ್ನು ಬಲಿ ಪಡೆದ ಅಲ್ಯುಮಿನಿಯಂ ಏಣಿ     

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ವಿರಾಜಪೇಟೆ ತಾಲ್ಲೂಕಿನ ಅರ್ವತೊಕ್ಲು ಗ್ರಾಮದಲ್ಲಿ ಮರದಿಂದ ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ತಂತಿ ಮೇಲೆ ಅಲ್ಯುಮಿನಿಯಂ ಏಣಿ ಜಾರಿ ಬಿದ್ದು, ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾವಡಿ ಗ್ರಾಮದ ಇಗ್ಗುಡ ಸತೀಶ್ (50), ಇಗ್ಗುಡ ರವಿ (45), ಮೊಟ್ಟೇರ ಧರ್ಮಜ (50) ಮೃತಪಟ್ಟವರು.

ಅರ್ವತೋಕ್ಲು ಗ್ರಾಮದ ರಾಮಜನ್ಮ ಅವರ ತೋಟದಲ್ಲಿ ತೆಂಗಿನ ಕಾಯಿ ಕೊಯ್ಲು ಮಾಡುತ್ತಿದ್ದಾಗ ಆಕಸ್ಮಿಕವಾಗಿ ಏಣಿ ಜಾರಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ರಾತ್ರಿ ಮನೆಗೆ ಬಾರದ ಕಾರಣ ಕುಟುಂಬದವರು ಸೋಮವಾರ ಬೆಳಿಗ್ಗೆ ಬಂದು ತೋಟದಲ್ಲಿ ನೋಡಿದಾಗ ದುರ್ಘಟನೆ ಬೆಳಕಿಗೆ ಬಂದಿದೆ.ಮೂವರ ದೇಹಗಳೂ ಸಂಪೂರ್ಣ ಕರಕಲಾಗಿವೆ.

ADVERTISEMENT

ಸತೀಶ್ ತೋಟದಲ್ಲಿ ರೈಟರ್ ಅಗಿ ಕೆಲಸ ಮಾಡುತ್ತಿದ್ದರು. ಧರ್ಮಜ ಚಾಲಕರಾಗಿ ದುಡಿಯುತ್ತಿದ್ದರು. ರವಿ ಇವರೊಂದಿಗೆ ತೋಟಕ್ಕೆ ಬಂದಿದ್ದರು.

ಘಟನೆ ನಡೆದಿದ್ದು ಹೇಗೆ?: ತೋಟದಲ್ಲಿ ತೆಂಗಿನ ಕಾಯಿ ಕೊಯ್ಲು ಮಾಡುತ್ತಿದ್ದಾಗ ಮರದ ಹತ್ತಿರದಲ್ಲಿ ಹಾದು ಹೋಗಿದ್ದ 11 ಕೆ.ವಿ. ವಿದ್ಯುತ್ ತಂತಿ ಮೇಲೆ ಏಣಿ ಬಿದ್ದ ಕಾರಣ ಅನಾಹುತ ನಡೆದಿದೆ.

ಏಣಿಯ ಬುಡದಲ್ಲಿಯೇ ಮೂವರ ಶವಗಳು ಕರಕಲಾಗಿವೆ. ಏಣಿ ಏರುವಾಗಲೇ ಅನಾಹುತ ನಡೆದಿರಬಹುದು ಎಂದು ಶಂಕಿಸಲಾಗಿದೆ. ಒಬ್ಬ ಏಣಿ ಏರುವಾಗ, ಇಬ್ಬರು ಏಣಿ ಜಾರದಂತೆ ಹಿಡಿದುಕೊಂಡಿರಬಹುದು. ಆಕಸ್ಮಿಕವಾಗಿ ಏಣಿ ಜಾರುವಾಗ ಒಬ್ಬರಿಗೊಬ್ಬರು ತಾಗಿಸಿಕೊಂಡಿದ್ದು, ಮೂವರಿಗೂ ವಿದ್ಯುತ್‌ ಪ್ರವಹಿಸಿದೆ. ಬೆಂಕಿಯಿಂದ ಸ್ಥಳದಲ್ಲಿ ಎಲೆಗಳು ಸುಟ್ಟುಹೋಗಿವೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.