ADVERTISEMENT

ಸಿದ್ದಾಪುರ: ಬಳಕೆಗೆ ಬಾರದ ನೂತನ ಸೇತುವೆ

ಅಮತ್ತಿ– ಕಣ್ಣಂಗಾಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸೇತುವೆ

ರೆಜಿತ್ ಕುಮಾರ್
Published 25 ಏಪ್ರಿಲ್ 2019, 19:30 IST
Last Updated 25 ಏಪ್ರಿಲ್ 2019, 19:30 IST
   

ಸಿದ್ದಾಪುರ: ಅಂದಾಜು ₹ 80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳು ಕಳೆದರೂ ಸೇತುವೆ ಮಾತ್ರ ಉದ್ಘಾಟನೆಗೊಂಡಿಲ್ಲ. ಕಿರಿದಾದ ಹಳೇ ಸೇತುವೆಯಲ್ಲೇ ಸಂಚರಿಸಬೇಕಾದ ದುಸ್ಥಿತಿ ಗ್ರಾಮಸ್ಥರದ್ದು!

ಅಮತ್ತಿ ಹಾಗೂ ಕಣ್ಣಂಗಾಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಕೊಮ್ಮೆತ್ತೋಡುವಿನಲ್ಲಿ ಕಿರಿದಾದ ಸೇತುವೆ ಇದ್ದು, ಅಪಘಾತಗಳು ಹೆಚ್ಚಾಗುತ್ತಿದ್ದವು.ಕಿರಿದಾದ ಸೇತುವೆಯಲ್ಲಿ ಬಸ್‌ ಸೇರಿದಂತೆ ವಾಹನಗಳಿಗೆ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ.

ಲೋಕೋಪಯೋಗಿ ಇಲಾಖೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ನಬಾರ್ಡ್ ಯೋಜನೆ ಅಡಿ ಅಮ್ಮತ್ತಿ–ಮೂರ್ನಾಡು ರಸ್ತೆಯಲ್ಲಿ ಸೇತುವೆ ನಿರ್ಮಿಸಲು 2015ರಲ್ಲಿ ₹ 80 ಲಕ್ಷ ಮಂಜೂರು ಮಾಡಲಾಗಿತ್ತು. ಬಳಿಕ ಮೈಸೂರಿನ ಗುತ್ತಿಗೆದಾರರೊಬ್ಬರು 2016ರಲ್ಲಿ ಸೇತುವೆ ಕಾಮಗಾರಿ ಕೈಗೆತ್ತಿಕೊಂಡು ಅಂದಾಜು 15 ಅಡಿ ಅಗಲದ ಸೇತುವೆಯನ್ನು 2017ರ ಮಾರ್ಚ್‌ನಲ್ಲಿ ಪೂರ್ಣಗೊಳಿಸಿದ್ದರು.

ADVERTISEMENT

ಸೇತುವೆ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳು ಕಳೆದರೂ ಈವರೆಗೂ ಗ್ರಾಮಸ್ಥರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಸೇತುವೆಗೆ ತೆರಳಲು ನಿರ್ಮಾಣ ಆಗಬೇಕಿದ್ದ ರಸ್ತೆ ಕಾಮಗಾರಿ ವಿಳಂಬವಾಗಿದ್ದು ಗ್ರಾಮಸ್ಥರು ಹಾಗೂ ಸವಾರರು ಕಿರಿದಾದ ಹಳೇಯ ಸೇತುವೆಯನ್ನೇ ಅವಲಂಬಿಸಬೇಕಾಗಿದೆ.

ಹಳೇ ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ತೀರಾ ಕಿರಿದಾಗಿದೆ. ಒಂದು ವಾಹನ ಬಂದರೆ ಮುಂಬದಿಯಿಂದ ಬರುವ ಸವಾರ ತನ್ನ ವಾಹನವನ್ನು ನಿಲ್ಲಿಸಿ ದಾರಿ ಬಿಟ್ಟುಕೊಡಬೇಕು.

ಮಾತ್ರವಲ್ಲದೇ ಸೇತುವೆ ರಸ್ತೆಯ ತಿರುವಿನಲ್ಲಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ₹ 80 ಲಕ್ಷ ಹಣ ವ್ಯಯಿಸಿ ನೂತನ ಸೇತುವೆ ನಿರ್ಮಾಣವಾಗಿದ್ದರೂ ನೂತನ ಸೇತುವೆಗೆ ರಸ್ತೆ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸೇತುವೆ ನೆನಗುದಿಗೆ ಬಿದ್ದಿದೆ.

ಕೂಡಲೇ ನೂತನ ಸೇತುವೆಗೆ ರಸ್ತೆ ಕಾಮಗಾರಿ ಕೈಗೊಳ್ಳಬೇಕು ಎಂಬುದು ಈ ಭಾಗದ ಸಾರ್ವಜನಿಕರ ಆಗ್ರಹವಾಗಿದೆ.

ಶಿಥಿಲಾವಸ್ಥೆಯಲ್ಲಿ ಹಳೇ ಸೇತುವೆ

ಅಮ್ಮತ್ತಿ- ಒಂಟಿಯಂಗಡಿಗೆ ತೆರಳುವ ರಸ್ತೆಯ ಕೊಮ್ಮೆತೋಡು ಸೇತುವೆ ಹಲವಾರು ವರ್ಷಗಳಿ ಹಿಂದೆ ನಿರ್ಮಾಣವಾಗಿದ್ದು, ಇದೀಗ ಸೇತುವೆಯ ಕೆಳಭಾಗದಲ್ಲಿ ಬಿರುಕು ಉಂಟಾಗಿದೆ.

ಸೇತುವೆಯು ಕಿರಿದಾಗಿದ್ದು, ಮೇಲೆ ಬಾಗದಲ್ಲಿಯೂ ಬಿರುಕುಗಳಿಂದ ಕೂಡಿದೆ. ರಸ್ತೆಯ ತಿರುವಿನಲ್ಲೇ ಸೇತುವೆ ಇರುವ ಕಾರಣ ಅಪಘಾತಗಳು ಸಂಭವಿಸುತ್ತಿದೆ. ರಾತ್ರಿ ವೇಳೆಯಲ್ಲಿ ತಿರುವಿನಲ್ಲಿರುವ ಹಳೇ ಸೇತುವೆ ಕಾಣದೇ ಕೆಲವರು ಕೆಸರುಮಯ ರಸ್ತೆಯಲ್ಲಿ ಹೊಸ ಸೇತುವೆ ಮೂಲಕ ಸಂಚರಿಸಿದ ಉದಾಹರಣೆಗಳಿವೆ.

***

ನಬಾರ್ಡ್ ಯೋಜನೆ ಅಡಿ ಸೇತುವೆ ನಿರ್ಮಿಸಲಾಗಿದೆ. ಸೇತುವೆಗೆ ನೂತನ ರಸ್ತೆ ನಿರ್ಮಾಣದ ಕಾಮಗಾರಿಯನ್ನೂ ಈ ವರ್ಷ ಪೂರ್ಣಗೊಳಿಸುತ್ತೇವೆ

–ಯತೀಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣವಾದರೂ ಸಾರ್ವಜನಿಕರಿಗೆ ಪ್ರಯೋಜನವಾಗಲಿಲ್ಲ. ಹಳೇ ಸೇತುವೆ ಕಿರಿದಾಗಿದೆ; ಅಪಾಯದಿಂದ ಕೂಡಿದೆ. ಕೂಡಲೇ ನೂತನ ಸೇತುವೆಗೆ ರಸ್ತೆ ನಿರ್ಮಿಸಬೇಕು

–ಸಹದೇವ, ಗ್ರಾಮಸ್ಥ, ಅಮ್ಮತ್ತಿ- ಒಂಟಿಯಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.