ADVERTISEMENT

ಬೀದಿಬದಿ ವ್ಯಾಪಾರಸ್ಥರ ಸ್ಥಳಾಂತರ: ನಗರಸಭೆ ವಿರುದ್ಧ ವ್ಯಾಪಾರಸ್ಥರ ಆಕ್ರೋಶ

ಸ್ಥಳಾಂತರ ಮಾಡದಂತೆ ಆಗ್ರಹ, ಜಿಲ್ಲಾಧಿಕಾರಿ– ಪೌರಾಯುಕ್ತರಿಗೂ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 12:54 IST
Last Updated 25 ಮಾರ್ಚ್ 2019, 12:54 IST
ಬೀದಿಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಿದಂತೆ ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸದಸ್ಯರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು
ಬೀದಿಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಿದಂತೆ ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸದಸ್ಯರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು   

ಮಡಿಕೇರಿ: ಬೀದಿಬದಿ ವ್ಯಾಪಾರಸ್ಥರನ್ನು ಸ್ಥಳಾಂತರ ಮಾಡದಂತೆ ಆಗ್ರಹಿಸಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರಸಭೆ ಸಿಬ್ಬಂದಿ ಶನಿವಾರ ದಿಢೀರ್‌ ಆಗಿ 20ಕ್ಕೂ ಹೆಚ್ಚು ಮಂದಿ ಬೀದಿಬದಿಯ ವ್ಯಾಪಾರಸ್ಥರನ್ನು ತೆರವುಗೊಳಿಸಿದ್ದು, ಈ ಕ್ರಮವನ್ನು ಪ್ರತಿಭಟನಾಕಾರರು ಖಂಡಿಸಿದರು.

ವ್ಯಾಪಾರಿಗಳಿಗೆ ಎಂದಿನಂತೆಯೇ ವ್ಯಾಪಾರ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಜಿಲ್ಲಾಕಾರಿ ಅನೀಸ್ ಕಣ್ಮಣಿ ಜಾಯ್‌ ಹಾಗೂ ಪೌರಾಯುಕ್ತ ರಮೇಶ್‌ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ಜಗದೀಶ್ ಮಾತನಾಡಿ, ಅಂಗಡಿ ತೆರವು ಮಾಡಿದ್ದರಿಂದ ವ್ಯಾಪಾರಸ್ಥರು ಬೀದಿಗೆ ಬೀಳುವಂತಾಗಿದೆ. ಬೀದಿಬದಿಯ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಿಸಬೇಕು ಎಂದು ಕೋರಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಮೃದ್ಧಿ ಯೋಜನೆಯ ಅಡಿ ಬೀದಿ ಬದಿಯ ಮಹಿಳಾ ವ್ಯಾಪಾರಿಗಳಿಗೆ ₹ 10 ಸಾವಿರ ಪ್ರೊತ್ಸಾಹ ಧನ ನೀಡಬೇಕು. ಬೀದಿಬದಿ ವ್ಯಾಪಾರಿಗಳಿಗೆ ವಸತಿ ಆಶ್ರಯ ಸೇರಿದಂತೆ ಮೂಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಅಧ್ಯಕ್ಷ ಎನ್. ಗುರುಸ್ವಾಮಿ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ವಸತಿ ಆಶ್ರಯಗಳು, ಪಿಂಚಣಿ, ಕುಡಿಯುವ ನೀರು, ಗೋದಾಮು, ಶೌಚಾಲಯ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾ ಉಸ್ತುವಾರಿ ಕೆ.ರವಿ, ಉಪಾಧ್ಯಕ್ಷ ಕೆ.ಕೆ.ದಿನೇಶ್, ಕಾರ್ಯದರ್ಶಿ ಸತೀಶ್, ಗೌರವಾಧ್ಯಕ್ಷ ಕೆ.ಬಿ.ರಾಜು, ಪ್ರಮುಖರಾದ ಕೆ.ಟಿ.ಶ್ರೀನಿವಾಸ್, ಸೋಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.