ADVERTISEMENT

ಎಂಜಿನಿಯರ್‌ಗೆ ತರಾಟೆ; ಕಾಮಗಾರಿ ಸ್ಥಗಿತ

ಒಳಚರಂಡಿ ಕಾಮಗಾರಿಗೆ ಸುಸಜ್ಜಿತ ಕಾಂಕ್ರೀಟ್‌ ರಸ್ತೆಯೇ ನಾಶ!

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 14:39 IST
Last Updated 25 ಏಪ್ರಿಲ್ 2019, 14:39 IST
ಮಡಿಕೇರಿಯ ಅರವಿಂದ್‌ ಮೋಟಾರ್ಸ್‌ ಎದುರು ರಸ್ತೆಯಲ್ಲಿ ಯುಜಿಡಿ ಕಾಮಗಾರಿಗಾಗಿ ಸುಸಜ್ಜಿತ ಕಾಂಕ್ರೀಟ್‌ ರಸ್ತೆಯನ್ನೇ ಜೆಸಿಬಿ ಬಳಸಿ ಅಗೆಯುತ್ತಿದ್ದ ಸ್ಥಳಕ್ಕೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್‌ ಭೇಟಿ ನೀಡಿ ಎಂಜಿನಿಯರ್‌ಅನ್ನು ತರಾಟೆಗೆ ತೆಗೆದುಕೊಂಡರು
ಮಡಿಕೇರಿಯ ಅರವಿಂದ್‌ ಮೋಟಾರ್ಸ್‌ ಎದುರು ರಸ್ತೆಯಲ್ಲಿ ಯುಜಿಡಿ ಕಾಮಗಾರಿಗಾಗಿ ಸುಸಜ್ಜಿತ ಕಾಂಕ್ರೀಟ್‌ ರಸ್ತೆಯನ್ನೇ ಜೆಸಿಬಿ ಬಳಸಿ ಅಗೆಯುತ್ತಿದ್ದ ಸ್ಥಳಕ್ಕೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್‌ ಭೇಟಿ ನೀಡಿ ಎಂಜಿನಿಯರ್‌ಅನ್ನು ತರಾಟೆಗೆ ತೆಗೆದುಕೊಂಡರು   

ಮಡಿಕೇರಿ: ನಗರದ ಅರವಿಂದ್‌ ಮೋಟಾರ್ಸ್ ಎದುರಿನ ರಸ್ತೆಯಲ್ಲಿ ಗುರುವಾರ ಯುಜಿಡಿ ಕಾಮಗಾರಿಗೆ ಕಾಂಕ್ರೀಟ್‌ ರಸ್ತೆಯನ್ನೇ ಅಗೆದು ಹಾಳು ಮಾಡಲಾಗುತ್ತಿತ್ತು. ಆ ಸ್ಥಳಕ್ಕೆ ದಿಢೀರ್‌ ಭೇಟಿ ನೀಡಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್‌ ಅವರು ಎಂಜಿನಿಯರ್‌ ಅನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಕಾಂಕ್ರೀಟ್‌ ರಸ್ತೆ ಅಗೆಯುವ ಕೆಲಸ ಸ್ಥಗಿತ ಮಾಡಲಾಯಿತು.

ಹಲವು ವರ್ಷಗಳ ಹಿಂದೆಯೇ ಆರಂಭಗೊಂಡಿರುವ ಯುಜಿಡಿ ಕಾಮಗಾರಿ ಇನ್ನು ಮುಗಿಸಲು ನಗರಸಭೆಗೆ ಸಾಧ್ಯವಾಗಿಲ್ಲ. ನಾವು ರಸ್ತೆ ಸುಧಾರಣೆಗೆ ಆದ್ಯತೆ ನೀಡುತ್ತೇವೆ. ನೀವು ಅತ್ತಿಂದ ರಸ್ತೆಯನ್ನು ಅಗೆದು ಹಾಳು ಮಾಡುತ್ತೀರಾ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನಿಗೆ ವಿರುದ್ಧವಾಗಿ ರಸ್ತೆಗೆ ಹಾನಿ ಉಂಟು ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಕಾಂಕ್ರೀಟ್ ಬಳಸಿ ರಸ್ತೆಯನ್ನು ಮೊದಲ ಸ್ಥಿತಿಗೆ ತರಬೇಕು ಎಂದು ಸೂಚನೆ ನೀಡಿದರು.

ADVERTISEMENT

ಕಾಂಕ್ರೀಟ್ ರಸ್ತೆಯನ್ನು ವೈಬ್ರೇಟರ್ ಬಳಸಿ ತೆರವು ಮಾಡುವುದಕ್ಕೂ ಮೊದಲು 4 ಇಂಚಿನಷ್ಟು ಆಳಕ್ಕೆ ರಸ್ತೆಯನ್ನು ಕತ್ತರಿಸಬೇಕಿತ್ತು. ಆದರೆ, ಒಂದು ಇಂಚಿನಷ್ಟು ಕಾಂಕ್ರೀಟ್‌ ರಸ್ತೆ ಕತ್ತರಿಸಲಾಗಿದೆ. ಎಂಜಿನಿಯರ್‌ ನಿರ್ಲಕ್ಷ್ಯ ತೋರುತ್ತಿದೆ ಎಂದು ದೂರಿದರು.

ಸಹಾಯಕ ಎಂಜಿನಿಯರ್ ನೇತೃತ್ವದಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿದೆ. ಕಳಪೆ ಕಾಮಗಾರಿ ನಡೆಸುತ್ತಿರುವ ಎಂಜಿನಿಯರ್‌ ತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಮಾಜಿ ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಒಪ್ಪಿಗೆ ಸೂಚಿಸಿದ ಎಂಜಿನಿಯರ್ ಜೀವನ್, ನಗರಸಭೆಯ ಆದೇಶದಂತೆ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ ಕೆಲಸದಲ್ಲಿ ಸಣ್ಣ ವ್ಯತ್ಯಾಸವಾದ ಕಾರಣ ಶಾಸಕರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಅವರ ಸೂಚನೆಯಂತೆ ಈಗ ಉಂಟಾಗಿರುವ ಹಾನಿಯನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.