
ಕುಶಾಲನಗರ: ‘ವನ್ಯಜೀವಿಗಳ ಮೇಲೆ ಹಗೆ ಸಾಧಿಸದೆ ನಾವು ಬದುಕೋಣ, ಅವುಗಳಿಗೂ ಅನುಕೂಲ ಮಾಡಿಕೊಡೋಣ’ ಎಂದು ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಸಿ. ಶಿವಕುಮಾರ್ ಹೇಳಿದರು.
ಸಮೀಪದ ದೊಡ್ಡ ಅಳುವಾರ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ವನ್ಯಜೀವಿ ಮಾನವ–ಸಹಬಾಳ್ವೆ, ಸಾಮರಸ್ಯ ಮತ್ತು ಜವಾಬ್ದಾರಿ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
‘ನೈಸರ್ಗಿಕ ಸಂಪನ್ಮೂಲಕ್ಕಾಗಿ ಸ್ಪರ್ಧೆ ನಡೆಯುತ್ತಿದೆ. ನಾವುಗಳು ವನ್ಯಜೀವಿಗಳ ಜೊತೆ ಸಾಮರಸ್ಯದಿಂದ ಸಹಬಾಳ್ವೆ ನಡೆಸಬೇಕಾಗುತ್ತದೆ. ಸಂಘರ್ಷಕ್ಕೆ ದಾರಿ ಮಾಡಿಕೊಡದೆ ಅನುಸರಿಸಿಕೊಳ್ಳುವ ಹಾಗೂ ಎಚ್ಚರಿಕೆಯಿಂದ ಇರಬೇಕಾಗಿದೆ’ ಎಂದು ಸಲಹೆ ನೀಡಿದರು.
ಕಾರ್ಯಾಗಾರ ಉದ್ಘಾಟಿಸಿದ ವನ್ಯಜೀವಿ ಪಶುವೈದ್ಯಕೀಯ ತಜ್ಞ ಡಾ. ಚೆಟ್ಟಿಯಪ್ಪ ಮಾತನಾಡಿ, ‘ಆನೆಗಳು ಬಹಳ ಬುದ್ದಿವಂತ ಪ್ರಾಣಿ, ಅವುಗಳಿಗೆ ಹೆಚ್ಚು ಆಹಾರ ಬೇಕಾಗುತ್ತದೆ. ಆದಷ್ಟೂ ಜನರು ಅವುಗಳ ತಂಟೆಗೆ ಹೋಗಬಾರದು’ ಎಂದರು.
ಬಾಗಮಂಡಲದ ಉಪವಲಯ ಅರಣ್ಯಾಧಿಕಾರಿ ಉಮಾಶಂಕರ್ ಮಾತನಾಡಿ, ವರ್ಷದಲ್ಲಿ ಯಾವ ಋತು, ದಿನದಲ್ಲಿ ಯಾವ ಅವಧಿಯಲ್ಲಿ ಸಂಘರ್ಷ ನಡೆಯುತ್ತೆ ಎಂದು ಅಂಕಿ ಅಂಶ ಸಮೇತ ವಿವರಿಸಿದರು. ಕಾಡು ಪ್ರಾಣಿಗಳು ಕಣ್ಣಿಗೆ ಬಿದ್ದರೆ ಇಲಾಖೆಯ ಸಹಾಯ ಪಡೆಯುವಂತೆ ಕೋರಿದರು.
ತರಬೇತಿಗೆ 60ಕ್ಕೂ ಹೆಚ್ಚು ರೈತರು, ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.