ADVERTISEMENT

ರಾಜ್ಯದಲ್ಲಿ ಸರ್ಕಾರ ಇದೆಯೇ?

ಬೇಸರದಿಂದ ಪ್ರಶ್ನಿಸಿದ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 16:29 IST
Last Updated 2 ಆಗಸ್ಟ್ 2022, 16:29 IST
ಕೆ.ಎಂ.ಗಣೇಶ್‌
ಕೆ.ಎಂ.ಗಣೇಶ್‌   

ಮಡಿಕೇರಿ: ರಾಜ್ಯದಲ್ಲಿ ನಡೆಯುತ್ತಿರುವ ಅಮಾಯಕರ ಕೊಲೆಗಳನ್ನು ನೋಡಿದರೆ ಸರ್ಕಾರ ಇದೆಯೇ ಎಂಬ ಅನುಮಾನ ಬರುತ್ತದೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್ ಪ್ರಶ್ನಿಸಿದರು.

ಅಮಾಯಕರು ಬಲಿಯಾಗುತ್ತಿದ್ದಾರೆ. ಎಲ್ಲರಿಗೆ ಸಾಂತ್ವನ ಹೇಳಬೇಕಾದ ಮುಖ್ಯಮಂತ್ರಿ ಒಬ್ಬರಿಗೆ ಮಾತ್ರ ಪರಿಹಾರ ನೀಡಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ಇದೆಯೇ, ಜನರಿಗೆ ರಕ್ಷಣೆ ಇದೆಯೇ ಎಂಬ ಅನುಮಾನಗಳು ಕಾಡುತ್ತಿವೆ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಕೊಲೆಯಾದರೆ ಅದು ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ ನಷ್ಟವಾಗುವುದಿಲ್ಲ. ಕೊಲೆಯಾದವರ ತಂದೆ, ತಾಯಿ, ಕುಟುಂಬದವರಿಗೆ ಭರಿಸಲಾಗದ ನಷ್ಟವಾಗುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.

ADVERTISEMENT

ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರು ಕೊಲೆಯಾದ ಎಲ್ಲರ ಕುಟುಂಬದವರಿಗೂ ಸಾಂತ್ವನ ಹೇಳಿದರು. ಅವರು ಮುಖ್ಯಮಂತ್ರಿಯಾಗಿದ್ದಾಗ ಕೊಡಗು ಜಿಲ್ಲೆಯಲ್ಲಿ ಜೆಡಿಎಸ್‌ನ ಒಬ್ಬ ಜನಪ್ರತಿನಿಧಿ ಇಲ್ಲದಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದರು. ಈ ಮೂಲಕ ದ್ವೇಷ ರಾಜಕಾರಣ ಬಿಡಲು ಅವರೊಂದು ಹಾದಿ ಹಾಕಿಕೊಟ್ಟರು ಎಂದು ಶ್ಲಾಘಿಸಿದರು.

‘ನಾವು ಭಾರತೀಯರು ಧರ್ಮಾತೀತ ಹಾಗೂ ಜಾತ್ಯಾತೀತವಾಗಿ ಬದುಕಬೇಕು. ಮನೆ, ತಂದೆ ತಾಯಿಗೆ ಅನ್ಯಾಯವಾಗಬಾರದು. ಜಾತಿ, ಧರ್ಮದ ಹೆಸರು ಹೇಳಿಕೊಂಡು ಕಿತ್ತಾಡಿಕೊಂಡು ಸಾಯುವುದು ಬೇಡ’ ಎಂದು ಹೇಳಿದರು.

ಆಗಸ್ಟ್ 5ರಂದು ಪ್ರತಿಭಟನೆ

ಕೇಂದ್ರ ಸರ್ಕಾರ ಶಾಲಾ ಮಕ್ಕಳು ಬಳಸುವ ಪೆನ್ಸಿಲ್‌ ಹಾಗೂ ಕಾಗದಕ್ಕೂ ಜಿಎಸ್‌ಟಿ ಹಾಕಿದೆ. ಇದನ್ನು ವಿರೋಧಿಸಿ ಆಗಸ್ಟ್ 5ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದರು.

ಶಾಲಾ ಮಕ್ಕಳು ಹಾಗೂ ಮಹಿಳೆಯರು ಜಿಎಸ್‌ಟಿ ಹೇರಿಕೆ ವಿರುದ್ಧ ಪ್ರಧಾನಿಯವರಿಗೆ ಪತ್ರ ಬರೆಯಬೇಕು ಎಂದು ಸಲಹೆ ನೀಡಿದರು.

ಪಕ್ಷದ ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಸ್.ನಾಗರಾಜ್ ಮಾತನಾಡಿ, ‘ಸರ್ಕಾರಕ್ಕೆ ಆಡಳಿತ ನಿರ್ವಹಣೆ ಮಾಡುವ ಶಕ್ತಿ ಇಲ್ಲ ಎಂದು ಅವರ ಸಂಘ ಪರಿವಾರದ ಸಂಘಟನೆಗಳೇ ಹೇಳಿವೆ’ ಎಂದು ಹರಿಹಾಯ್ದರು.

ವಿರಾಜಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ, ‘ಜಿಲ್ಲೆಯಲ್ಲಿ ಅವೈಜ್ಞಾನಿಕ ಕಾಮಗಾರಿಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.

ಕುಶಾಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಡಿ.ರವಿಕುಮಾರ್, ಪೊನ್ನಂಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗಣೇಶ್, ಪಕ್ಷದ ಖಜಾಂಚಿ ಡೆನ್ನಿ ಬರೋಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.