ಮಡಿಕೇರಿ: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆಗೆ ಈ ವರ್ಷ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಬ್ಯಾಂಕಿನ ಅಧ್ಯಕ್ಷ ಬಾಂಡ್ ಗಣಪತಿ ತಿಳಿಸಿದರು.
ಜಿಲ್ಲೆಯಲ್ಲಿನ 36,756 ರೈತರಿಗೆ ₹ 830.32 ಕೋಟಿ ಬೆಳೆ ಸಾಲವನ್ನು ವಿತರಣೆ ಮಾಡಲಾಗಿದೆ. ಇದರಲ್ಲಿ ₹ 724.93 ಕೋಟಿ ಎಂದರೆ ಶೇ 87ರಷ್ಟು ಸಾಲವನ್ನು ಬ್ಯಾಂಕು ಹಾಗೂ ಸಂಘಗಳ ಸ್ವಂತ ಬಂಡವಾಳದಿಂದಲೇ ವಿತರಿಸಲಾಗಿದೆ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಬಾರ್ಡ್‌ನಿಂದ 2024–25ನೇ ಸಾಲಿಗೆ ₹ 105.39 ಕೋಟಿ ಮಾತ್ರ ಪುರ್ನಧನ ಬಿಡುಗಡೆಯಾಗಿದೆ. ಈ ಹಿಂದೆ ಶೇ 60ರಷ್ಟು ರಿಯಾಯಿತಿ ಬಡ್ಡಿದರದಲ್ಲಿ ಪುನರ್ಧನ ನೀಡುತ್ತಿದ್ದು, ಈ ವರ್ಷ ಶೇ 12.69ರಷ್ಟು ಮಾತ್ರವೇ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ವಿತರಿಸುವ ಸಾಲವನ್ನು ‘ಫ್ರೂಟ್ಸ್’ ತಂತ್ರಾಂಶದ ಮೂಲಕ ರೈತರ ವಿಶಿಷ್ಟ ಗುರುತಿನ ಸಂಖ್ಯೆಯೊಂದಿಗೆ ನೋಂದಣಿ ಕಚೇರಿಯಲ್ಲಿ ಸಾಮಾನ್ಯ ಅಡಮಾನ ಮಾಡಿ ಸಾಲ ವಿತರಿಸಬೇಕು ಎಂದು ಸರ್ಕಾರವೇ ಆದೇಶಿಸಿದೆ. ಆದರೆ, ಜಿಲ್ಲೆಯಲ್ಲಿ ಪೌತಿಖಾತೆ, ಜಂಟಿ ಖಾತೆ ಇತರೆ ಸಮಸ್ಯೆಗಳಿಂದ ಕೆಲವು ರೈತರಿಗೆ ಸಾಲ ಸಿಕ್ಕಿಲ್ಲ. ಇದಕ್ಕೆ ಬ್ಯಾಂಕು ಜವಾಬ್ದಾರಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಸಾಲಸೌಲಭ್ಯ ವಿತರಣೆಗೆ ಏಕರೂಪದ ತಂತ್ರಾಂಶ ಅಳವಡಿಸಲು ನಿರ್ಧರಿಸಿದೆ. ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ತಂತ್ರಾಂಶ ಅಳವಡಿಸಲಿದೆ. ಆಗ ರೈತರು ಅಗತ್ಯ ದಾಖಲಾತಿ ಒದಗಿಸಬೇಕಿದೆ. ಆದರೆ, ಈ ವರ್ಷ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಈ ಕುರಿತು ಬಹಿರಂಗ ಚರ್ಚೆಗೆ ಸಿದ್ದ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಹರೀಶ್ ಪೂವಯ್ಯ, ನಿರ್ದೇಶಕರಾದ ಶರವಣ, ಕಿಲನ್ ಗಣಪತಿ, ಎಚ್.ಕೆ.ಮಾದಪ್ಪ, ಹೊಸೂರು ಸತೀಶ್‌ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.