ADVERTISEMENT

ನಾಪಂಡ ಮುತ್ತಪ್ಪ ಅವರಿಗೆ ನೋಟಿಸ್‌ ನೀಡಿದ ಕೆ.ಎಂ.ಗಣೇಶ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 11:27 IST
Last Updated 24 ಜನವರಿ 2023, 11:27 IST
   

ಮಡಿಕೇರಿ: ಕೊಡಗು ಜಿಲ್ಲೆಯ ಜೆಡಿಎಸ್‌ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್ ಅವರು ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾದ ನಾಪಂಡ ಮುತ್ತಪ್ಪ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

‘ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಪ್ರಚಾರ ನಡೆಸುತ್ತಿರುವುದು, ವರಿಷ್ಠರ ಆದೇಶ ಇಲ್ಲದೇ ಪಂಚರತ್ನ ಕಾರ್ಯಕ್ರಮ ಎಂದು ಹೇಳಿಕೊಳ್ಳುತ್ತಿರುವುದೂ ಸರಿಯಲ್ಲ. ಈ ‍ಕೂಡಲೇ ಪಂಚರತ್ನ ವಾಹನವನ್ನು ತಡೆ ಹಿಡಿಯಬೇಕು’ ಎಂದೂ ಸೂಚಿಸಿದ್ದಾರೆ.

‘ವರಿಷ್ಠರು ಸೂಚಿಸುವವರೆಗೂ ಯಾರೂ ತಾವೇ ಅಭ್ಯರ್ಥಿ ಎಂದು ಪ್ರಚಾರ ನಡೆಸಬಾರದು. ನೋಟಿಸ್ ತಲುಪಿದ 7 ದಿನಗಳ ಒಳಗೆ ಉತ್ತರ ನೀಡ ಬೇಕು’ ಎಂದೂ ನೋಟಿಸ್‌ನಲ್ಲಿ ಹೇಳಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಕೆ.ಎಂ.ಗಣೇಶ್ ಅವರನ್ನು ಸಂಪರ್ಕಿಸಿದಾಗ, ‘ನೋಟಿಸ್ ನೀಡಿರುವುದು ನಿಜ. ವರಿಷ್ಠರು ನಾಪಂಡ ಮುತ್ತಪ್ಪ ಅವರನ್ನೇ ಅಭ್ಯರ್ಥಿ ಎಂದು ಘೋಷಿಸಿದರೆ ನಮ್ಮ ಆಕ್ಷೇಪ ಇಲ್ಲ. ಆದರೆ, ಅವರು ಘೋಷಿಸುವುದಕ್ಕೂ ಮೊದಲೇ, ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ ಆರಂಭಿಸುವುದಕ್ಕೂ ಮುನ್ನವೇ ಅದನ್ನು ನಡೆಸುವುದು ಸರಿಯಲ್ಲ. ಹೀಗಾಗಿ, ನೋಟಿಸ್ ನೀಡಲಾಗಿದೆ. ನಾನು ಆಕಾಂಕ್ಷಿಯಂತೂ ಅಲ್ಲ’ ಎಂದು ಹೇಳಿದರು.

ಫೆಬ್ರುವರಿಯಲ್ಲಿ ಪಂಚರತ್ನ ಕಾರ್ಯಕ್ರಮ ಕೊಡಗಿನಲ್ಲಿ ಆರಂಭವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.