ಸೋಮವಾರಪೇಟೆ: ಮಂಗಳವಾರ ಸಂಜೆ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಲವು ಅಂಗಡಿ ಮತ್ತು ಮನೆಗಳಿಗೆ ನೀರು ನುಗ್ಗಿ, ಅಂಗಳ ಜಲಾವೃತಗೊಂಡ ಸ್ಥಳಗಳಿಗೆ ಶಾಸಕ ಡಾ.ಮಂತರ್ ಗೌಡ ಅವರ ನಿರ್ದೇಶನದಂತೆ ಬುಧವಾರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಆಲೆಕಟ್ಟೆ ರಸ್ತೆಯ ಚಂಗಪ್ಪ ಅವರ ಮನೆಯಲ್ಲಿ ಬಾಡಿಗೆ ಇರುವ ನಾಗರಾಜು ಅವರ ಮನೆಗೆ ನೀರು ನುಗ್ಗಿದ್ದು, ನಷ್ಟವಾಗಿತ್ತು. ಕಕ್ಕೆಹೊಳೆ ಬಳಿಯ ಸತೀಶ್ ಎಂಬುವವರ ಕ್ಯಾಂಟೀನ್‌ಗೆ ನೀರು ನುಗ್ಗಿದ್ದರಿಂದ ಸಮಸ್ಯೆಯಾಗಿದೆ. ಕಕ್ಕೆಹೊಳೆಗೆ ನೂತನ ಸೇತುವೆ ನಿರ್ಮಾಣ ಮಾಡಿದ್ದು, ರಸ್ತೆಯಲ್ಲಿ ಬರುವ ನೀರು ಸರಾಗವಾಗಿ ಹೊಳೆಗೆ ಹೋಗಲು ಅವಕಾಶ ಮಾಡದಿರುವುದರಿಂದ ಸಮಸ್ಯೆಯಾಗಿದೆ. ಇದರಿಂದ ರಾಜ್ಯ ಹೆದ್ದಾರಿಯಲ್ಲಿ ಪಟ್ಟಣದ ಭಾಗಗಳಿಂದ ಬರುವ ನೀರು ನೇರವಾಗಿ ಅಂಗಡಿ ಮುಂಗಟ್ಟುಗಳಿಗೆ ನುಗ್ಗುತ್ತಿದೆ ಎಂದು ಕ್ಯಾಂಟೀನ್ ಮಾಲೀಕ ಸತೀಶ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಎಇಇ ನಾರಾಯಣಮೂರ್ತಿ ಮತ್ತು ಲೋಕೋಪಯೋಗಿ ಇಲಾಖೆಯ ಎಇಇ ಕುಮಾರ್ ಬುಧವಾರ ಭೇಟಿ ನೀಡಿ, ನೀರು ಸರಾಗವಾಗಿ ಹರಿಯಲು ಅಗಲ ಚರಂಡಿ ಹಾಗೂ ಮೋರಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಚೇತನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ, ಕಾಂಗ್ರೆಸ್ ಪ್ರಮುಖರಾದ ಚೇತನ್, ಸೋಮೇಶ್, ಮಧುಸೂಧನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.