ಸಿದ್ದಾಪುರ: ಗಡಿ ಜಿಲ್ಲೆಯಲ್ಲಿ ಓಣಂ ಹಬ್ಬದ ಸಂಭ್ರಮ ಗರಿಗೆದರಿದ್ದು, ಮಳೆಯ ನಡುವೆಯೂ ಹೂವು, ತರಕಾರಿ ಮಾರಾಟ ಭರ್ಜರಿಯಾಗಿ ನಡೆಯಿತು.
ಕೇರಳಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಮಲಯಾಳಿಗರು ಇದ್ದು, ಓಣಂ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಓಣಂ ಹಬ್ಬದ ಪ್ರಮುಖ ಆಕರ್ಷಣೆ ಹೂವಿನ ರಂಗೋಲಿಗಾಗಿ ಜಿಲ್ಲೆಯ ವಿವಿಧೆಡೆ ಭರ್ಜರಿಯಾಗಿ ಹೂವಿನ ವ್ಯಾಪಾರ ನಡೆದಿದೆ. ಹಾಗೇಯೇ ಓಣಂ ಹಬ್ಬದೂಟಕ್ಕಾಗಿ ತರಕಾರಿ ಅಗತ್ಯವಿದ್ದು, ಜನರು ತರಕಾರಿ ಅಂಗಡಿಗಳಿಗೆ ಮುಗಿಬಿದ್ದು, ಖರೀದಿಸಿದರು. ಸಿದ್ದಾಪುರ ಸೇರಿದಂತೆ ಜಿಲ್ಲೆಯ ಪಟ್ಟಣಗಳಲ್ಲಿ ಹೂವಿನ ಮಾರಾಟ ಕಂಡುಬಂತು. ಹೂವು ಹಾಗೂ ತರಕಾರಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಬೆಲೆ ಏರಿಕೆಯ ನಡುವೆಯೂ ಸಂಭ್ರಮದಿಂದ ಜಿಲ್ಲೆಯಲ್ಲಿ ಓಣಂ ಆಚರಿಸುತ್ತಿದೆ.
ಪೂಕಳಂ, ಓಣಂ ಸದ್ಯ: ಓಣಂ ಪ್ರಯುಕ್ತ ಮನೆ ಮನೆಗಳಲ್ಲಿ ಪೂಕಳಂ (ಹೂವಿನ ರಂಗೋಲಿ) ರಚಿಸುತ್ತಾರೆ. ಸುಮಾರು 20ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ಹೊಂದಿರುವ ಓಣಂ ಸದ್ಯ (ಹಬ್ಬದೂಟ) ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ. ಸಾಂಪ್ರದಾಯಿ ಉಡುಗೆ ತೊಟ್ಟು, ಕುಟುಂಬಸ್ಥರೊಂದಿಗೆ ಹಬ್ಬವನ್ನು ಆಚರಿಸುವುದು ವಾಡಿಕೆ.
ಜಿಲ್ಲೆಯಲ್ಲಿ ಹೂವು ಹಾಗೂ ತರಕಾರಿ ಬೆಲೆ ಗಗನಕ್ಕೇರಿದ್ದು, ಬೆಲೆ ಏರಿಕೆಯ ನಡುವ ಓಣಂ ಆಚರಿಸಲಾಗುತ್ತಿದೆ. ಸೆವಂತಿಗೆ, ಚೆಂಡು ಹೂವು ಪ್ರತಿ ಮಾರಿಗೆ ₹100ಕ್ಕೆ ಮಾರಾಟ ಮಾಡಲಾಗುತ್ತಿದೆ. ಓಣಂ ಸಂದರ್ಭ ಮಾಂಸಹಾರ ಮಾಡದೇ, ತರಕಾರಿ ಬೆಲೆಯು ಗಗನಕ್ಕೇರಿದೆ.
ಓಣಂ ಹಿನ್ನೆಲೆ: ರಾಕ್ಷಸ ವಂಶದ ಮಹಾಬಲಿ ಚಕ್ರವರ್ತಿ ಕೇರಳವನ್ನು ಆಳ್ವಿಕೆ ನಡೆಸುತ್ತಿದ್ದನು. ನ್ಯಾಯವಂತ, ಉದಾರವಾದಿಯಾಗಿದ್ದ ಬಲಿಯ ಆಳ್ವಕೆಯಲ್ಲಿ ರಾಜ್ಯದಲ್ಲಿ ಬಡತನವಿರಲಿಲ್ಲ. ಪ್ರಜೆಗಳು ಸಂತುಷ್ಠರಾಗಿದ್ದರು. ಬಲಿಯ ಜನಪ್ರಿಯತೆಯನ್ನು ನೋಡಿದ ದೇವತೆಗಳು ಮಹಾವಿಷ್ಣುವಿನಲ್ಲಿ ಪ್ರಾರ್ಥಿಸಿ, ವಿಷ್ಣುವು ವಾಮನ ಅವತಾರ ತಾಳಿದರು. ಬಲಿಯು ಯಜ್ಞ ನಡೆಸುತ್ತಿದ್ದ ವೇಳೆ ಆಗಮಿಸಿದ ಕುಬ್ಜ ಬ್ರಾಹ್ಮಣನಾದ ವಾಮನ ತನಗೆ ಮೂರು ಹೆಜ್ಜೆಯಲ್ಲಿ ಆವರಿಸುವ ಜಾಗ ವರವಾಗಿ ನೀಡಬೇಕೆಂದು ಕೇಳಿದನು. ದಾನಿಯಾಗಿದ್ದ ಬಲಿಯು ಇದಕ್ಕೆ ಒಪ್ಪಿದನು. ಆ ವೇಳೆ ಬೃಹತ್ ಆಕಾರಕ್ಕೆ ಬೆಳೆದ ವಾಮನ ಮೊದಲ ಹೆಜ್ಜೆಯನ್ನು ಭೂಲೋಕದಲ್ಲಿ, ಎರಡನೇ ಹೆಜ್ಜೆಯನ್ನು ಆಕಾಶವನ್ನು ಆವರಿಸಿ, ಮೂರನೇ ಹೆಜ್ಜೆ ಎಲ್ಲಿ ಇಡಬೇಕೆಂದು ಕೇಳಿದ. ಮಹಾವಿಷ್ಣುವಿನ ಅವತಾರವನ್ನು ಅರಿತ ಬಲಿಯು, ತನ್ನ ತಲೆಯ ಮೇಲೆ ಇಡುವಂತೆ ತಿಳಿಸಿ ತಲೆ ಬಾಗಿದನು. ವಿಷ್ಣು ಮೂರನೇ ಹೆಜ್ಜೆ ಬಲಿಯ ತಲೆಯಲ್ಲಿ ಇಟ್ಟು ಪಾತಾಳಕ್ಕೆ ತಳ್ಳಿದನು. ತನ್ನ ಪ್ರಜೆಗಳನ್ನು ನೋಡಲು ವರ್ಷಕ್ಕೆ ಒಮ್ಮೆ ಅವಕಾಶ ನೀಡಬೇಕೆಂದು ಬಲಿಯು ಕೇಳಿಕೊಂಡಾಗ ವಿಷ್ಣುವು ಅದಕ್ಕೆ ಒಪ್ಪಿದ್ದು, ಪ್ರತಿ ವರ್ಷದ ಓಣಂ ಸಂದರ್ಭ ಬಲಿ ಚಕ್ರವರ್ತಿ ಮನೆ ಮನೆಗೆ ಬರುತ್ತಾನೆ ಎಂಬುದು ಪ್ರತೀತಿ.
ಹೂವು ತರಕಾರಿ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆ ನಡುವೆಯೂ ಹಬ್ಬ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಇರುವ ಸಾವಿರಾರು ಮಲಯಾಳಿಗರು ಇದ್ದು ಮನೆಗಳಲ್ಲಿ ಸಡಗರದಿಂದ ಹಬ್ಬ ಆಚರಿಸಲಾಗುತ್ತಿದೆಕೃಷ್ಣ ಕರಡಿಗೋಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.