
ಮಡಿಕೇರಿ: ಇಲ್ಲಿನ ಕೋಟೆಯೊಳಗಿನ ಅರಮನೆಯಲ್ಲಿ ಕಳೆದ 7 ದಿನಗಳಿಂದ ನಡೆಯುತ್ತಿದ್ದ ವಿಶ್ವ ಪರಂಪರೆ ಸಪ್ತಾಹಕ್ಕೆ ಮಂಗಳವಾರ ತೆರೆ ಬಿತ್ತು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕಳೆದ 7 ದಿನಗಳಿಂದ ಏರ್ಪಡಿಸಿದ್ದ ಈ ಪ್ರದರ್ಶನಕ್ಕೆ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ, ಅಪರೂಪದ ಛಾಯಾಚಿತ್ರಗಳನ್ನು, ಹಳೆಯ ನೋಟುಗಳು, ನಾಣ್ಯಗಳನ್ನು ಕಣ್ತುಂಬಿಕೊಂಡರು.
ಒಟ್ಟು 7 ದಿನಗಳ ಕಾಲ ಇಲ್ಲಿ ಪುರಾತತ್ವ ಇಲಾಖೆಗೆ ಸೇರಿದ ಶಿಲ್ಪಕಲೆಗಳ ಛಾಯಚಿತ್ರ, ಕೊಡಗಿನ ಪರಂಪರೆಯ ಛಾಯಾಚಿತ್ರ, ಪುರಾತನ ವಸ್ತುಗಳ ಪ್ರದರ್ಶನಗಳು ನಡೆದವು. ವಂದೇ ಮಾತರಂ ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯ ಕುರಿತು ರಸಪ್ರಶ್ನೆ ಸ್ಪರ್ಧೆ, ಶಾಲಾಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಕೊಡಗಿನ ಪ್ರಾದೇಶಿಕ ಇತಿಹಾಸ ಕುರಿತು ವಿಶೇಷ ಉಪನ್ಯಾಸ, ಕೊಡಗಿನ ಜಾನಪದ ಗೀತೆಯ ಕುರಿತು ವಿಶೇಷ ಕಾರ್ಯಕ್ರಮ, ವಂದೇ ಮಾತರಂ ಸಾಮೂಹಿಕ ಗಾಯನ, ಪಾರಂಪರಿಕ ನಡಿಗೆ ಹಾಗೂ ಇತರ ಕಾರ್ಯಕ್ರಮಗಳು ನಡೆದವು.
ಮಂಗಳವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪಿಎಂಶ್ರೀ ಶಾಲೆ ಹಾಗೂ ಸಂತ ಜೋಸೆಫರ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪುರಾತತ್ವ ಇಲಾಖೆಯ ನಿವೃತ್ತ ಉಪ ಮುಖ್ಯ ಅಧೀಕ್ಷಕ ಡಾ.ಎನ್.ಸಿ.ಪ್ರಕಾಶ್, ಉಪ ಮುಖ್ಯ ಪುರಾತತ್ವ ಎಂಜಿನಿಯರ್ ಗಡಮ್ ಶ್ರೀನಿವಾಸ್, ಅಧಿಕಾರಿ ಸುನಿಲ್ ಕುಮಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಪುರಾತನ ನಾಣ್ಯ ಸಂಗ್ರಾಹಕ ಕೇಶವ ಮೂರ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.