ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯು ಬುಧವಾರ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು
ಮಡಿಕೇರಿ: ಸಾರ್ವಜನಿಕ ಫಲಕದ ಶೇ 60ರಷ್ಟು ಭಾಗದಲ್ಲಿ ಕನ್ನಡ ಇರಬೇಕು ಎಂಬ ರಾಜ್ಯಸರ್ಕಾರದ ಆದೇಶವನ್ನು ಕೊಡಗು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರಬೇಕು ಎಂದು ಆದೇಶಿಸಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಅಭಿನಂದಿಸಿ ಪತ್ರ ಬರೆಯಲು ಇಲ್ಲಿ ಬುಧವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ‘ಜಿಲ್ಲಾಧಿಕಾರಿ ಮಾತ್ರವಲ್ಲ ಇಂತಹ ಮಹತ್ವದ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರವನ್ನೂ ಅಭಿನಂದಿಸಿ ಪತ್ರ ಬರೆಯಲಾಗುವುದು’ ಎಂದು ಹೇಳಿದರು. ನಂತರ, ಪರಿಷತ್ತಿನ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
‘ಚುನಾವಣೆ ಮತ್ತು ಶಾಲೆಗಳಿಗೆ ರಜೆ ಇದ್ದ ಕಾರಣ ಬಾಕಿ ಇರುವ ದತ್ತಿ ಕಾರ್ಯಕ್ರಮಗಳನ್ನು ಜೂನ್ 15ರ ಒಳಗಾಗಿ ಮಾಡಬೇಕು. ಅಲ್ಲದೇ 2024- 25ರ ನೂತನ ದತ್ತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕಿದೆ’ ಎಂದು ಕೇಶವ್‌ಕಾಮತ್ ತಿಳಿಸಿದರು. ಎಲ್ಲ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಸಮಿತಿಗಳು ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ವತಿಯಿಂದ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಘಟಕಗಳ ಕಾರ್ಯಕಾರಿ ಸಮಿತಿಯ ಸದಸ್ಯರ ಭಾವಚಿತ್ರ ಮತ್ತು ಮಾಹಿತಿ ಇರುವ ಪುಸ್ತಕವನ್ನು ಬಿಡುಗಡೆ ಮಾಡುವ ಯೋಜನೆ ಇದ್ದು ಕೂಡಲೇ ಅದಕ್ಕೆ ಬೇಕಾದ ಭಾವಚಿತ್ರ ಅರ್ಜಿ ನೀಡಬೇಕು ಎಂದೂ ಕೋರಿದರು.
ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ‘ಜಿಲ್ಲಾಧ್ಯಕ್ಷರಿಗೆ ಆರೋಗ್ಯದ ಸಮಸ್ಯೆಯಿಂದ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕಾಗಿರುವುದು ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿ ಮತ್ತು ಹೋಬಳಿ ಸಮಿತಿಗಳ ಜವಾಬ್ದಾರಿ. ಈಗಾಗಲೇ ಚೆಟ್ಟಿಮಾನಿಯಲ್ಲಿ ನಡೆದ ಮಡಿಕೇರಿ ತಾಲ್ಲೂಕು ಗ್ರಾಮಸಿರಿ ಕಾರ್ಯಕ್ರಮ, ಕರಿಕೆಯಲ್ಲಿ ನಡೆದ ಗಡಿನಾಡ ಉತ್ಸವ, ಕುಶಾಲನಗರ ತಾಲ್ಲೂಕು ಹೆಬ್ಬಾಲೆಯಲ್ಲಿ ನಡೆದ ಗ್ರಾಮಸಿರಿ ಉತ್ಸವ ಸೇರಿದಂತೆ ದತ್ತಿ ಕಾರ್ಯಕ್ರಮಗಳಲ್ಲಿ, ಸಂಸ್ಥಾಪನಾ ದಿನಾಚರಣೆ ಪಾಲ್ಗೊಂಡು ಕಾರ್ಯಕ್ರಮವನ್ನು ಸಮರ್ಪಕವಾಗಿ ನಡೆಸಿಕೊಟ್ಟಂತಹ ಎಲ್ಲ ಸದಸ್ಯರಿಗೂ ಅಭಿನಂದನೆ’ ಎಂದರು.
ಮೃತಪಟ್ಟಿರುವ ಸಾಹಿತ್ಯ ಪರಿಷತ್ತಿನ ಸದಸ್ಯರ ಪಟ್ಟಿ ತಯಾರಿಸಿ ಈಗಾಗಲೇ ಎಲ್ಲಾ ತಾಲ್ಲೂಕು ಸಮಿತಿಗಳಿಗೆ ಕಳುಹಿಸಲಾಗಿದೆ. ಅದನ್ನು ಪರಿಶೀಲಿಸಿ ದೃಢಪಡಿಸಿ ಕೇಂದ್ರಕ್ಕೆ ಕಳುಹಿಸಬೇಕಿದೆ. ಮುಂದಿನ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಮೃತ ಸದಸ್ಯರ ಹೆಸರನ್ನು ತೆಗೆದುಹಾಕುವ ಕೆಲಸ ನಡೆಯಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯ ಸಮಿತಿ ಸದಸ್ಯರಾದ ಹಂಚೇಟಿರ ಫ್ಯಾನ್ಸಿ ಮುತ್ತಣ್ಣ ತಮ್ಮ ಅತ್ತೆ ಮಾವ ಅವರ ಹೆಸರಿನಲ್ಲಿ ₹50 ಸಾವಿರ ರೂಪಾಯಿಗಳ ದತ್ತಿ ಸ್ಥಾಪನೆ ಮಾಡುವುದಾಗಿ ಘೋಷಿಸಿದರು.
ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಎಸ್.ಐ.ಮುನಿರ್ ಅಹಮದ್, ರೇವತಿ ರಮೇಶ್, ಜಿಲ್ಲಾ ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್, ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್, ಸಂಪಾಜೆ ಹೋಬಳಿ ಅಧ್ಯಕ್ಷ ಗೋಪಾಲ್ ಪೆರಾಜೆ, ಮುರ್ನಾಡು ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್, ಕೋಶಾಧಿಕಾರಿ ಕೆ.ಡಿ.ವಿಂದ್ಯಾ, ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಫ್ಯಾನ್ಸಿ ಮುತ್ತಣ್ಣ, ಮ.ನಾ.ವೆಂಕಟನಾಯಕ, ಸಹನಾ ಕಾಂತಬೈಲು, ಗೌರಮ್ಮ ಮಾದಮಯ್ಯ, ಚೊಕ್ಕಾಡಿ ಪ್ರೇಮ ರಾಘವಯ್ಯ, ಎಚ್.ಪಿ ಜಯಮ್ಮ, ಎಚ್.ಎಸ್ ಪ್ರೇಮ್ ಕುಮಾರ್, ಕುಶಾಲನಗರ ತಾಲ್ಲೂಕು ಕೋಶಾಧಿಕಾರಿ ಕೆ.ವಿ.ಉಮೇಶ್, ಮಡಿಕೇರಿ ತಾಲ್ಲೂಕು ಕೋಶಾಧಿಕಾರಿ ಸಿದ್ದರಾಜು ಬೆಳ್ಳಯ್ಯ, ಮಡಿಕೇರಿ ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಅಂಬೆಕಲ್ ನವೀನ್ ಮತ್ತು ಕಚೇರಿ ಸಿಬ್ಬಂದಿ ರೇಣುಕಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.