ADVERTISEMENT

ಮಡಿಕೇರಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ, 8 ಮಂದಿಗೆ ಅಂಗಾಂಗ ದಾನ

ಅಂತ್ಯಕ್ರಿಯೆಯಲ್ಲಿ 1,500ಕ್ಕೂ ಅಧಿಕ ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 8:04 IST
Last Updated 12 ಅಕ್ಟೋಬರ್ 2022, 8:04 IST
ಮಕ್ಕಳೊಂದಿಗೆ ಇದ್ದ ಆಶಾ
ಮಕ್ಕಳೊಂದಿಗೆ ಇದ್ದ ಆಶಾ   

ಮಡಿಕೇರಿ: ಇಲ್ಲಿನ ಸುದರ್ಶನ ಬಡಾವಣೆಯ ನಿವಾಸಿ ಆಶಾ (53) ಮಿದುಳಿನ ಪಾರ್ಶ್ವವಾಯುವಿಗೆ ತುತ್ತಾಗಿ ನಿಧನರಾದರು. ಅವರ 4 ಅಂಗಾಂಗಗಳನ್ನು 8 ಮಂದಿಗೆ ದಾನ ಮಾಡಲಾಯಿತು. ಅವರ ಅಂತ್ಯಕ್ರಿಯೆ ಮಂಗಳವಾರ ಇಲ್ಲಿನ ಮೈಸೂರು ರಸ್ತೆಯಲ್ಲಿರುವ ಕೊಡವ ರುದ್ರಭೂಮಿಯಲ್ಲಿ ನಡೆಯಿತು. ಅವರಿಗೆ ಪತಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.

ಕಳೆದ 21 ವರ್ಷಗಳಿಂದ ಇಲ್ಲಿ ಶಿಶುವಿಹಾರ ನಡೆಸುತ್ತಿದ್ದ ಅವರು ಮಕ್ಕಳಿಗೆ ದಸರೆ ರಜೆ ನೀಡಿದ್ದರು. ಅ. 10ರಂದು ಮತ್ತೆ ತರಗತಿಗಳು ಆರಂಭವಾಗುತ್ತವೆ ಎಂದು ತಮ್ಮಲ್ಲಿದ್ದ 28 ಮಕ್ಕಳಿಗೆ ತಿಳಿಸಿದ್ದರು. ರಜೆ ಅವಧಿಯಲ್ಲಿ ಬೆಂಗಳೂರಿನ ತಮ್ಮ ಪುತ್ರಿ ಮನೆಗೆ ತೆರಳಿದ್ದ ವೇಳೆ ಶನಿವಾರ ಮಿದುಳಿನ ಪಾರ್ಶ್ವವಾಯುವಿಗೆ ತುತ್ತಾದರು. ತಕ್ಷಣವೇ ನಾರಾಯಣ ಹೃದಯಾಲಯಕ್ಕೆ ಚಿಕಿತ್ಸೆಗೆ ದಾಖಲಿಸಿದರೂ ಸ್ಪಂದಿಸದ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ನಂತರ, ಅವರ ಕಣ್ಣುಗಳು, ಮೂತ್ರಪಿಂಡಗಳು, ಹೃದಯ, ಲಿವರ್‌ನ್ನು ದಾನ ಮಾಡಲಾಯಿತು.

ಇವರ ಶಿಶುವಿಹಾರದಲ್ಲಿ ಮಕ್ಕಳನ್ನು ಬಿಟ್ಟು ನಿರ್ಭೀತಿಯಿಂದ ಪೋಷಕರು ತಮ್ಮ ತಮ್ಮ ಕೆಲಸಗಳಿಗೆ ತೆರಳುತ್ತಿದ್ದರು. ನೂರಾರು ಮಕ್ಕಳು ಇವರ ಆರೈಕೆಯಲ್ಲಿ ಬೆಳೆದಿದ್ದಾರೆ. ಮಕ್ಕಳಿಗೆ ಆಟಿಕೆ ನೀಡುವುದು, ಕಥೆ ಹೇಳುವುದು, ಹಾಡು ಹೇಳಿಕೊಡುವುದು ಮೊದಲಾದ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಮಕ್ಕಳ ಮನ ಗೆದ್ದಿದ್ದರು. ಬಹಳಷ್ಟು ಮಕ್ಕಳು ಸಂಜೆ ಮನೆಗೆ ತೆರಳಲು ಹಿಂದೇಟು ಹಾಕುತ್ತಿದ್ದರು. ಇಡೀ ಬಡಾವಣೆಯಲ್ಲಿ ಎಲ್ಲರೊಂದಿಗೂ ನಗುನಗುತ್ತಲೇ ಮಾತನಾಡುತ್ತಿದ್ದ ಆಶಾ ಅವರ ಸಾವು ಸ್ಥಳೀಯ ನಿವಾಸಿಗಳಲ್ಲಿ ದುಃಖ ತರಿಸಿದೆ.

ADVERTISEMENT

ದಸರೆ ರಜೆಯ ನಂತರ ಶಿಶುವಿಹಾರಕ್ಕೆ ಬಂದ ಮಕ್ಕಳಿಗೆ ತಮ್ಮ ನೆಚ್ಚಿನ ಶಿಕ್ಷಕಿ ಮೃತಪಟ್ಟಿರುವ ಸುದ್ದಿ ಬರಸಿಡಿಲಿನಿಂದ ಅಪ್ಪಳಿಸಿತು. ಅವರ ಸಾವಿಗೆ ಮಕ್ಕಳು ಮಾತ್ರವಲ್ಲ ಸ್ಥಳೀಯರೂ ಕಂಬಿನಿ ಮಿಡಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ಕಾವೇರಪ್ಪ, ‘ಆಶಾ ಅವರ ಸಾವು ನಮಗೆಲ್ಲ ಆಘಾತ ಉಂಟು ಮಾಡಿದೆ. ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಅವರು ಸಾರ್ಥಕತೆ ಮೆರೆದಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.