ADVERTISEMENT

ದೇಗುಲದ ಪಾವಿತ್ರ್ಯತೆ ಧಕ್ಕೆ ವಿರೋಧಿಸಿ ಪಾದಯಾತ್ರೆ ಇಂದು

ನೆಲ್ಯಹುದಿಕೇರಿ ಗ್ರಾಮದಲ್ಲಿರುವ ಸತ್ಯನಾರಾಯಣ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 6:16 IST
Last Updated 15 ಅಕ್ಟೋಬರ್ 2024, 6:16 IST

ಮಡಿಕೇರಿ: ನೆಲ್ಯಹುದಿಕೇರಿ ಗ್ರಾಮದಲ್ಲಿರುವ ಸತ್ಯನಾರಾಯಣ ದೇವಸ್ಥಾನದ ಪಾವಿತ್ರ್ಯತೆಗೆ ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಆಗ್ರಹಿಸಿ ದೇವಸ್ಥಾನದ ಆಡಳಿತ ಮಂಡಳಿ, ಶ್ರೀ ವಿಷ್ಣುಮೂರ್ತಿ ಸತ್ಯನಾರಾಯಣಸ್ವಾಮಿ ದೇವಸ್ಥಾನ ಟ್ರಸ್ಟ್ ಹಾಗೂ ಗ್ರಾಮಸ್ಥರು ಅ. 15ರಂದು ಬೆಳಿಗ್ಗೆ 9.30ಕ್ಕೆ ದೇವಸ್ಥಾನದಿಂದ ಗ್ರಾಮ ಪಂಚಾಯಿತಿಯವರೆಗೂ ಪಾದಯಾತ್ರೆ ನಡೆಸಲಿದ್ದಾರೆ.

‘ದೇವಸ್ಥಾನದ ಪಕ್ಕದಲ್ಲೇ ಹಾಗೂ ದೇಗುಲಕ್ಕೆ ಸೇರಿದ ಜಾಗದಲ್ಲಿ ಹಿಂದೂ ರುದ್ರಭೂಮಿ ನಿರ್ಮಿಸಲು ಕೆಲವರು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಸ್ಮಶಾನ ನಿರ್ಮಾಣವಾದರೆ ಕೊಡಗಿನ ಏಕೈಕ ಸತ್ಯನಾರಾಯಣ ದೇಗುಲ ಎನಿಸಿದ ಈ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾಗಲಿದೆ’ ಎಂದು ಟ್ರಸ್ಟ್‌ನ ಅಧ್ಯಕ್ಷ ಟಿ.ಜಿ.ಚಂದ್ರಶೇಖರ್ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ನಾವು ಹಿಂದೂ ರುದ್ರಭೂಮಿ ನಿರ್ಮಾಣದ ವಿರೋಧಿಗಳಲ್ಲ’ ಎಂದು ಸ್ಪಷ್ಟಪಡಿಸಿದ ಅವರು, ‘ಬೇರೆ ಜಾಗದಲ್ಲಿ ಸ್ಮಶಾನ ನಿರ್ಮಾಣ ಮಾಡಲಿ. ಅದಕ್ಕೆ ನಮ್ಮ ಸಹಮತ ಇದೆ. ಆದರೆ, ದೇಗುಲಕ್ಕೆ ಸೇರಿದ ಜಾಗದಲ್ಲಿ, ದೇಗುಲದ ಪಕ್ಕದಲ್ಲಿ ನಿರ್ಮಾಣ ಮಾಡಬಾರದು’ ಎಂದು ಒತ್ತಾಯಿಸಿದರು.

ADVERTISEMENT

ಸದ್ಯ, ಹಿಂದೂ ರುದ್ರಭೂಮಿಯನ್ನು ನಿರ್ಮಿಸಬೇಕು ಎಂದು ಒತ್ತಾಯಿಸಲಾಗುತ್ತಿರುವ ಸ್ಥಳದಲ್ಲಿಯೇ ಪಿರಿಯಪಟ್ಟಣದಮ್ಮ ಎಂದು ಕರೆಯಲಾಗುವ ಮಸಣಿಕಮ್ಮ ದೇವಿಯ ಆರಾಧನೆಯನ್ನು ಸುಮಾರು 200 ವರ್ಷಗಳಿಗೂ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಈಗ ಅದೇ ಜಾಗದಲ್ಲಿ ಸ್ಮಶಾನ ನಿರ್ಮಾಣ ಮಾಡಬೇಕು ಎಂದು ಹಠ ತೊಡುವುದು ಎಷ್ಟು ಸರಿ? ಇದರಿಂದ
ಭಕ್ತರ ಮನಸ್ಸಿಗೆ ನೋವಾಗುವುದಿಲ್ಲವೇ? ಎಂದೂ ಅವರು ಪ್ರಶ್ನಿಸಿದರು.

ಪಾದಯಾತ್ರೆಯ ಬಳಿಕ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಒಂದು ವೇಳೆ ಸ್ಮಶಾನ ನಿರ್ಮಿಸುವ ಪ್ರಸ್ತಾವ ಕೈಬಿಡದಿದ್ದರೆ ಜಿಲ್ಲಾ ಕೇಂದ್ರದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ದೇವಸ್ಥಾನದ ಮುಖ್ಯಸ್ಥ ಟಿ.ಬಿ.ಗಣೇಶ್, ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಟಿ.ಇ.ಸತ್ಯಜಿತ್, ಕಾರ್ಯದರ್ಶಿ ಟಿ.ಜಿ.ವಿನೋದ್, ಖಜಾಂಚಿ ಕೆ.ಜಿ.ಸುಪ್ರೀತ್, ನಿರ್ದೇಶಕ ಕೆ.ಸಿ.ಮಾನಸ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.