
ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಪೈರು ಕಟಾವಿನ ಹಂತಕ್ಕೆ ಬಂದಿದ್ದು, ಕಟಾವಿನ ಈ ಹಂತದಲ್ಲಿ ರೈತರು ಹತ್ತಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಕಾಡುಪ್ರಾಣಿಗಳ ಉಪಟಳ, ಕಾರ್ಮಿಕರ ಕೊರತೆ ಸೇರಿ ಹಲವು ಕಾರಣಗಳಿಂದ ಭತ್ತ ಕಟಾವು ನಿಧಾನಗತಿಯಲ್ಲಿ ಸಾಗುತ್ತಿದೆ. ಇಲ್ಲಿಗೆ ಸಮೀಪದ ನೆಲಜಿ ಗ್ರಾಮದ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಅಧಿಕವಾಗಿದ್ದು ಭತ್ತದ ಗದ್ದೆಗಳಿಗೆ ದಾಳಿ ಮಾಡಿದ್ದು, ಭತ್ತದ ಕೃಷಿಯಲ್ಲಿ ನಷ್ಟ ಆಗಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ವಾರದ ಹಿಂದೆ ಭತ್ತದ ಫಸಲು ತಿಂದು, ತುಳಿದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟುಮಾಡಿವೆ.
ನೆಲಜಿ ಗ್ರಾಮದ ಬೆಳೆಗಾರರಾದ ಚೆಟ್ಟಿನೆರವನ ಶಿವಕುಮಾರ್, ಮೊಣ್ಣಪ್ಪ, ಕುಶಾಲಪ್ಪ, ಕರುಂಬಯ್ಯ ಸೇರಿ ಕೊಯ್ಲು ಮಾಡಿದ ಸುತ್ತಮುತ್ತಲಿನ ಗದ್ದೆ ಹಾಗೂ ಕಾಫಿ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಟ್ಟು ಭಾರಿ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನೆಲಜಿ, ಪೇರೂರು ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ದಾಳಿ ಮಾಡುತ್ತಿರುವ ಕಾಡಾನೆಗಳಿಂದಾಗಿ ಗ್ರಾಮದ ನಿವಾಸಿಗಳಲ್ಲಿ ಭಯದ ವಾತಾವರಣ ಉಂಟಾಗಿದೆ.
ಕಾಫಿ ಕೊಯ್ಲು ಸಮಯ ಆಗಿರುವುದರಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಭತ್ತದ ಬೆಳೆ ಕಟಾವು ಮಾಡಲೂ ಒಪ್ಪುತ್ತಿಲ್ಲ. ಕೂಲಿಕಾರ್ಮಿಕರ ವೇತನವೂ ದಿಢೀರ್ ಏರಿಕೆಯಾಗಿದೆ. ಇದರಿಂದ ತೀವ್ರ ಸಮಸ್ಯೆ ಎದುರಾಗಿದೆ. ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಬೆಳೆಗಾರರು, ನಷ್ಟ ಪರಿಹಾರವನ್ನು ಕೂಡಲೇ ನೀಡಬೇಕು. ಕಾಡಾನೆಗಳ ಹಾವಳಿ ನಿಯಂತ್ರಿಸಿ, ಅವುಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಭತ್ತದ ಕೊಯ್ಲಿಗೆ ಕಾರ್ಮಿಕರ ಅಭಾವ ಆಗಿದೆ. ಕಾಫಿ ಬೆಳೆಗಾರರು ಕಾಫಿ ಕೊಯ್ಲು ಆರಂಭಿಸಿರುವುದರಿಂದ ಹೆಚ್ಚಿನ ಕೂಲಿ ಲಭಿಸುತ್ತದೆಂದು ಕಾರ್ಮಿಕರು ಕಾಫಿ ತೋಟಗಳಿಗೆ ತೆರಳುತ್ತಿದ್ದು, ಭತ್ತದ ಕಟಾವಿಗೆ ಕಾರ್ಮಿಕರು ಸಿಗುತ್ತಿಲ್ಲ. ರಸ್ತೆ ಸೌಕರ್ಯ ಇರುವಲ್ಲಿ ಭತ್ತದ ಕಟಾವಿಗೆ ಯಂತ್ರಗಳ ಬಳಕೆಯಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕರನ್ನು ಅವಲಂಬಿಸಬೇಕಾಗಿದ್ದು, ಇದರಿಂದ ಕಟಾವಿಗೆ ಸಮಸ್ಯೆಯಾಗಿದೆ.
ನಾಪೋಕ್ಲು ವ್ಯಾಪ್ತಿಯ ಬೇತು ಗ್ರಾಮದಲ್ಲಿ ಕಾಡುಹಂದಿಗಳ ಉಪಟಳ ತೀವ್ರವಾಗಿದೆ. ಪ್ರತಿನಿತ್ಯ ರಾತ್ರಿಯ ವೇಳೆ ಗದ್ದೆಗಳಿಗೆ ನುಸುಳುವ ಕಾಡುಹಂದಿಗಳು ಬೆಳೆಯನ್ನು ಧ್ವಂಸಮಾಡುತ್ತಿವೆ. ಬೆಳೆ ಕೈಗೆಟುಕುವ ಹಂತದಲ್ಲಿ ಸಮಸ್ಯೆಎದುರಾಗಿದೆ ಎಂದು ಬೇತು ಗ್ರಾಮದ ರೈತ ದಿವಾಕರ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.