ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇದೀಗ ಭತ್ತದ ನಾಟಿ ಬಹುತೇಕ ಎಲ್ಲೆಡೆ ಮುಗಿಯುವ ಹಂತಕ್ಕೆ ಬಂದಿದೆ. ಕಳೆದ ವಾರಾಂತ್ಯಕ್ಕೆ 20,861 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ. ಈ ಬಾರಿ ಅವಧಿಗೂ ಮುನ್ನವೇ ಹಲವೆಡೆ ಈಗಾಗಲೇ ನಾಟಿ ಕಾರ್ಯ ಮುಗಿದು ಹಲವು ದಿನಗಳೆ ಕಳೆದಿವೆ. ಈಗ ಕೆಲವೆಡೆ ಎಲೆ ಸುರುಳಿ ಹುಳುವಿನ ಕೀಟಗಳ ಹಾವಳಿ ಆರಂಭವಾಗಿದ್ದು, ಬೆಳೆಗಾರರು ಚಿಂತಿತರಾಗಿದ್ದಾರೆ.
ಭತ್ತದ ನಾಟಿ ಮುಗಿದು 20ರಿಂದ 25 ದಿನಗಳಾಗಿರುವ ಈ ವೇಳೆ ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆಗಳ ಕೆಲವು ಗದ್ದೆಗಳಲ್ಲಿ ಈ ಹುಳು ಕಾಟ ಆರಂಭವಾಗಿದೆ.
ಎಲೆ ಸುರುಳಿ ಹುಳು ಸಸಿ ಮಡಿಯಲ್ಲಿ ಮತ್ತು ನಾಟಿ ಮಾಡಿದ ಗದ್ದೆಗಳಲ್ಲಿ ಕಂಡು ಬಂದಿವೆ. ಹುಳುಗಳು ಎಲೆಯ ಅಂಚನ್ನು ಮಡಚಿ ಸುರುಳಿ ಸುತ್ತಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಇದರಿಂದ ಪೈರು ಬೆಳ್ಳಗೆ ಬಿಳಿಚಿ ಕೊಂಡಂತೆ ಕಾಣಿಸುತ್ತದೆ. ಇದು ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ ತೆನೆ ಬರದೆ ನಷ್ಟವುಂಟಾಗುತ್ತದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.
ಈ ಬಾರಿ ಉತ್ತಮ ಮಳೆಯಾಯಿತೆಂದು ರೈತರೆಲ್ಲರೂ ಖುಷಿಯಾಗಿರುವ ವೇಳೆ ಎಲೆ ಸುರುಳಿ ಹುಳುವಿನ ಕಾಟ ರೈತರನ್ನು ನಿರಾಸೆಗೊಳಿಸಿದೆ.
ಈ ರೀತಿ ಕೀಟಗಳ ಕಾಟ, ರೋಗಗಳು ಹಾಗೂ ಹೆಚ್ಚುತ್ತಿರುವ ಕೂಲಿ ಕಾರಣಗಳಿಂದ ಬಹಳಷ್ಟು ರೈತರು ಭತ್ತದ ಕೃಷಿ ಬಗ್ಗೆಯೇ ತಮ್ಮ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಇದರಿಂದ ವರ್ಷದಿಂದ ವರ್ಷಕ್ಕೆ ಭತ್ತ ಬಿತ್ತನೆ ಮಾಡುವ ಪ್ರದೇಶ ಕಡಿಮೆಯಾಗುತ್ತಲೇ ಇದೆ. ಒಮ್ಮೆ ಮಳೆ ಬಾರದಿದ್ದರೆ, ಮತ್ತೊಮ್ಮೆ ಮಳೆ ಹೆಚ್ಚು ಬರುತ್ತದೆ. ಉತ್ತಮ ಮಳೆ ಸುರಿದರೆ ಈ ರೀತಿ ಕೀಟ ಇಲ್ಲವೇ ರೋಗಗಳ ಕಾಟ ಶುರುವಾಗುತ್ತದೆ ಎಂದು ರೈತರು ಭತ್ತದ ಬಗ್ಗೆ ತಮ್ಮ ಒಲವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ಈ ಬಾರಿ ಕೃಷಿ ಇಲಾಖೆ ಒಟ್ಟು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಿಸುವ ಗುರಿ ಹೊಂದಿತ್ತು. ಮುಂಗಾರಿನ ಅಂತ್ಯ ಹಾಗೂ ಕಳೆದ ವಾರಾಂತ್ಯಕ್ಕೆ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರವೇ ಭತ್ತದ ಬಿತ್ತನೆ ಮುಗಿದಿದೆ. ಈ ವರ್ಷವೂ ಭತ್ತ ಬಿತ್ತನೆಯಲ್ಲಿ ನಿಗದಿತ ಗುರಿ ತಲುಪುವುದು ಅನುಮಾನ ಮೂಡಿಸಿದೆ.
ಏನಿದು ಕೀಟ?
ಮೋಡ ಕವಿದ ವಾತಾವರಣ ತುಂತುರು ಮಳೆ ಹನಿ ಬಿಟ್ಟು ಬಿಟ್ಟು ಬರುವ ಬಿಸಿಲು ಮತ್ತು ಮಳೆಯು ಎಲೆ ಸುರುಳಿ ಕೀಟ ವೇಗವಾಗಿ ಹರಡಲು ಕಾರಣಗಳಾಗಿವೆ. ಪತಂಗವು ತಿಳಿ ಹಳದಿ ಬಣ್ಣ ಹೊಂದಿದ್ದು ರೆಕ್ಕೆಗಳ ಮೇಲೆ ತೆಳುವಾದ ಕಪ್ಪು ಅಡ್ಡ ಗೆರೆಗಳಿರುತ್ತವೆ. ಹೆಣ್ಣು ಪತಂಗ ಸುಮಾರು 300 ಮೊಟ್ಟೆಗಳನ್ನು ಎಲೆಯ ಮೇಲೆ ಮಧ್ಯದ ನರಕ್ಕೆ ಸಮಾನಾಂತರ ರೇಖೆಯಲ್ಲಿ ಇಡುತ್ತದೆ. 4 ರಿಂದ 7 ದಿನಗಳಲ್ಲಿ ಮೊಟ್ಟೆಯಿಂದ ಮರಿಗಳು ಹೊರಬಂದು 15 ರಿಂದ 27 ದಿನಗಳವರೆಗೆ ಎಲೆಯನ್ನು ಕೆರೆದು ತಿನ್ನುತ್ತಾ ಬೆಳೆದು ಕೋಶಾವಸ್ಥೆಯನ್ನು ಸೇರುತ್ತವೆ. 6ರಿಂದ 8 ದಿನಗಳವರೆಗೆ ಕೋಶಾವಸ್ಥೆಯಲ್ಲಿದ್ದು ತದನಂತರ ಪ್ರೌಢಕೀಟವು ಹೊರ ಬರುತ್ತದೆ.
ಪರಿಹಾರ ಏನು?
ಎಲೆ ಸುರುಳಿ ಹುಳುವಿನ ಹತೋಟಿಗೆ ಗೋಣಿಕೊಪ್ಪಲಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಭಾಗದ ವಿಜ್ಞಾನಿ ಡಾ.ಕೆ.ವಿ.ವೀರೇಂದ್ರಕುಮಾರ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಇದರ ಹತೋಟಿಗೆ ಗದ್ದೆಯ ಬದುವಿನಲ್ಲಿರುವ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಬೇಕು ಶಿಫಾರಸ್ಸು ಮಾಡಿರುವಷ್ಟು ಮಾತ್ರ ಸಾರಜನಕ ಗೊಬ್ಬರವನ್ನು ಕೊಡಬೇಕು ಕೀಟವಿರುವ ಸೂಚನೆಯನ್ನು ನೋಡಿಕೊಂಡು ಇಂಡಾಕ್ಸಿಕಾರ್ಬ್ 0.5 ಮಿ.ಲೀ. ಅಥವಾ ಫ್ಲುಬೆಂಡಮೈಡ 0.4 ಮಿ.ಲಿ ಇವುಗಳಲ್ಲಿ ಯಾವುದಾದರೂ ಒಂದು ಕೀಟನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.ಸಿಂಪರಣೆ ಮಾಡುವಾಗ ಕೀಟನಾಶಕಕ್ಕೆ ಅಂಟು ದ್ರಾವಣವನ್ನು ಸೇರಿಸಿ ಸಿಂಪಡಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ. ಮಾಹಿತಿಗಾಗಿ ದೂ: 08274–295274 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.