ಕುಶಾಲನಗರ : ಉತ್ತರ ಕೊಡಗಿನ ಗಡಿಗ್ರಾಮ ಶಿರಂಗಾಲ ಗ್ರಾಮದಲ್ಲಿ ಮಾ.14 ರಂದು ಶುಕ್ರವಾರ ಗ್ರಾಮದೇವತೆ ಮಂಟಿಗಮ್ಮ ದೇವಿಯ ದ್ವೈವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವ ನಡೆಯಲಿದ್ದು, ದೇವಾಲಯ ಸಮಿತಿ ಸಜ್ಜಾಗಿದೆ.
ಅಂದು ಹಬ್ಬದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣ ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗುತ್ತದೆ. ಅಂದು ರಾತ್ರಿ 10 ಗಂಟೆಗೆ ಗ್ರಾಮದ ಸಂತೆ ಮೈದಾನದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ ಇರುತ್ತದೆ.ರಾತ್ರಿ 10.30 ಗಂಟೆಗೆ ಗ್ರಾಮದ ಮೂಲಸ್ಥಾನ ಕೋಟೆಯ ದೇವಸ್ಥಾನದಿಂದ ಪವಿತ್ರ ಬನಕ್ಕೆ ದೇವಿಯ ಉತ್ಸವವನ್ನು ಮಂಗಳವಾದ್ಯಗಳೊಂದಿಗೆ ಶ್ರದ್ಧಾಭಕ್ತಿ ಯಿಂದ ಕೊಂಡೊಯ್ಯ ಲಾಗುವುದು ಎಂದು ಗ್ರಾಮದ ಶ್ರೀ ಮಂಟಿಗಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್ ತಿಳಿಸಿದರು.
ಗ್ರಾಮದ ಪವಿತ್ರ ಬನದಲ್ಲಿ ಹರಕೆ ಹೊತ್ತ ಭಕ್ತರು ಬೆಂಕಿಕೊಂಡ ಹಾಯ್ದು ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸುವರು. ದೇವಸ್ಥಾನವನ್ನು ವಿದ್ಯಾರ್ಥಿಗಳು ದೀಪಾಲಂಕಾರದಿಂದ ಹಾಗೂ ದೇವಿಯ ವಿಗ್ರಹವನ್ನು ವಿವಿಧ ಹೂವುಗಳಿಂದ ಸಿಂಗರಿಸಲಾಗುತ್ತದೆ.
ಗ್ರಾಮದ ಮಂಟಿಗಮ್ಮ ದೇವರ ಹಬ್ಬ ಹಾಗೂ ಉಮಾಮಹೇಶ್ವರ ರಥೋತ್ಸವ ಹಾಗೂ ಜಾತ್ರೋತ್ಸೋವವನ್ನು ಗ್ರಾಮದ ಎಲ್ಲಾ ಜನಾಂಗದವರು ಸೇರಿ ಶ್ರದ್ಧಾಭಕ್ತಿಯಿಂದ ಆಚೆಇಸಿಕೊಂಡು ಬರುತ್ತಿದ್ದು,ಇದರಿಂದ ಗ್ರಾಮದ ಜನರಲ್ಲಿ ಪರಸ್ಪರ ಪ್ರೀತಿ,ವಿಶ್ವಾಸ ಹಾಗೂ ಗ್ರಾಮದಲ್ಲಿ ಒಗ್ಗಟ್ಟು ಕಾಪಾಡಲಾಗುತ್ತಿದೆ ಎಂದು ದೇಗುಲ ಸಮಿತಿ ಕಾರ್ಯದರ್ಶಿ ಎಂ.ಎಸ್.ಗಣೇಶ್ ತಿಳಿಸಿದ್ದಾರೆ.
ಜಾತ್ರೋತ್ಸೋವ: ಮಾ.14 ರಿಂದ 16 ರ ವರೆಗೆ ದೇವಾಲಯದ ಆವರಣದಲ್ಲಿ ಸೇರುವ ಜಾತ್ರೆ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ದೇವಿಯ ದರ್ಶನ ಇರುತ್ತದೆ.ಹಬ್ಬದ ಅಂಗವಾಗಿ ಕ್ರೀಡೋತ್ಸವ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.ಭಾನುವಾರ ಗೆಳೆಯರ ಬಳಗದ ವತಿಯಿಂದ ಬೆಂಗಳೂರಿನ ಸ್ನೇಹ ಮೇಲೋಡಿಸ್ ಆರ್ಕೇಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಮಾ.10 ರಂದು ಮಹಾದ್ವಾರ ಉದ್ಘಾಟನೆ, ಪಲ್ಲಕ್ಕಿ ಉತ್ಸವ : ಸೋಮವಾರ ಬೆಳಿಗ್ಗೆ 7 ಗಂಟೆಗೆ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಕಾವೇರಿ ನದಿಯಿಂದ ಮಂಗಳವಾದ್ಯದೊಂದಿಗೆ ಗಂಗೆಪೂಜೆ ಹಾಗೂ ಪೂರ್ಣ ಕುಂಭ ಕಲಶ ಹೊತ್ತು ಮಹಿಳೆಯರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ಮೂರ್ತಿಯೊಂದಿಗೆ ಮೆರವಣಿಗೆ ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಕೊಣನೂರು - ಶಿರಂಗಾಲ ಮುಖ್ಯ ರಸ್ತೆ ಬಳಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಬಸವಾಪಟ್ಟಣ ತೊಟ್ಟಿಮನೆ ಬಾಲಣ್ಣ ಕುಟುಂಬಸ್ಥರು ನಿರ್ಮಿಸಿರುವ ಮಹಾದ್ವಾರವನ್ನು ಉದ್ಘಾಟಿಸಲಾಗುತ್ತದೆ.
ದೇವಾಲಯ ಸಮಿತಿ ಗೌರವಾಧ್ಯಕ್ಷ ಎಸ್.ಆರ್.ಕಾಳಿಂಗಪ್ಪ,ಉಪಾಧ್ಯಕ್ಷ ಎಸ್.ಜೆ.ಉಮೇಶ್,ಕಟ್ಟಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಕೆ.ಪ್ರಸನ್ನ,ಕಾರ್ಯದರ್ಶಿ ಬಿ.ಎಸ್.ಬಸವಣ್ಣಯ್ಯ ಹಾಗೂ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಮ ದೇವತೆ ಹಬ್ಬದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.
ಉಮಾಮಹೇಶ್ವರ ರಥೋತ್ಸವ 17ಕ್ಕೆ
ಶಿರಂಗಾಲ ಗ್ರಾಮದಲ್ಲಿ ಮಾ.17ರಂದು ಮಧ್ಯಾಹ್ನ 12.30 ಗಂಟೆಗೆ ಉಮಾಮಹೇಶ್ವರ ವಾರ್ಷಿಕ ರಥೋತ್ಸವ ನಡೆಯಲಿದೆ. ಕಾವೇರಿ ನದಿ ದಂಡೆಯಲ್ಲಿರುವ ದೇವಸ್ಥಾನದಿಂದ ಹೂವಿನಿಂದ ಅಲಂಕೃತ ರಥವನ್ನು ಸಜ್ಜುಗೊಳಿಸಿ ಸಂತೆ ಮೈದಸನದವರೆಗೆ ಎಳೆದು ಪುನೀತರಾಗುತ್ತಾರೆ. ಹಬ್ಬದ ಅಂಗವಾಗಿ ಈ ಮೂರು ದಿನ ದಾನಿಗಳು ಭಕ್ತಾದಿಗಳಿಗೆ ಬೆಳಿಗ್ಗೆ ಉಪಾಹಾರ, ದಿನವಿಡೀ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.