ADVERTISEMENT

ಕೇರಳ ವಾಸ್ತುಶಿಲ್ಪದ ಶೈಲಿ: ಪಡುವಣದ ಪಾಲೂರು ಮಹಾಲಿಂಗೇಶ್ವರ ದೇವಾಲಯದ ವೈಶಿಷ್ಟ್ಯ

ನಾ‍ಪೋಕ್ಲು ಸಮೀಪದ ಅಪರೂಪದ ದೇಗುಲ lಜೋಡು ನೃತ್ಯಬಲಿ ಉತ್ಸವದ ವಿಶೇಷ

ಸಿ.ಎಸ್.ಸುರೇಶ್
Published 25 ಫೆಬ್ರುವರಿ 2023, 19:31 IST
Last Updated 25 ಫೆಬ್ರುವರಿ 2023, 19:31 IST
ನಾಪೋಕ್ಲು ಬಳಿಯ ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯ
ನಾಪೋಕ್ಲು ಬಳಿಯ ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯ   

ನಾಪೋಕ್ಲು: ಕೊಡಗು ಜಿಲ್ಲೆಯ ದೇವಾಲಯಗಳ ಪೈಕಿ ವೈಶಿಷ್ಟ್ಯಪೂರ್ಣವಾಗಿ ಗಮನ ಸೆಳೆಯುವ ಪಾಲೂರು ಮಹಾಲಿಂಗೇಶ್ವರ ದೇವಾಲಯವು ಕಾವೇರಿ ನದಿ ತಟದಲ್ಲಿದ್ದು, ಅತ್ಯಂತ ಪ್ರಾಚೀನವಾದ ದೇವಾಲಯ ಎನಿಸಿದೆ.

ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ಮಾರ್ಗದ ಮಧ್ಯೆ ಸಿಗುವ ಬೆಟ್ಟಗೇರಿ ಸಮೀಪ ಎಡಕ್ಕೆ ಇರುವ ನಾಪೋಕ್ಲುವಿನ ರಸ್ತೆಯಲ್ಲಿ ಸಾಗಿದರೆ ಪಾಲೂರು ಸಿಗುತ್ತದೆ. ರಸ್ತೆಬದಿಯಲ್ಲಿರುವ ಕಮಾನಾಕೃತಿಯ ಪ್ರವೇಶ್ವಾರವು ದೇವಾಲಯಕ್ಕೆ ಭೇಟಿ ನೀಡುವ ಭಕ್ತರನ್ನು ಸ್ವಾಗತಿಸುತ್ತದೆ.

ಕೇರಳ ವಾಸ್ತುಶಿಲ್ಪದ ಶೈಲಿಯಲ್ಲಿರುವ ಈ ದೇವಾಲಯವನ್ನು ತಲುಪಬೇಕೆಂದರೆ ರಸ್ತೆಯಿಂದ ಪ್ರವೇಶ ದ್ವಾರದ ಮೂಲಕ ಸುಮಾರು 101 ಮೆಟ್ಟಿಲುಗಳನ್ನು ಏರಬೇಕು. ದೇವಾಲಯದ ಸುತ್ತಲೂ ವಿಶಾಲವಾದ ಪ್ರಾಕಾರವಿದ್ದು ಗರ್ಭಗುಡಿಯು ಚೌಕಾಕಾರವಾಗಿದೆ. ಅಲ್ಲದೆ, ಎದುರಿಗೆ ಆಕರ್ಷಕವಾದ ಮುಖಮಂಟಪವನ್ನು ಹೊಂದಿದೆ. ‌ಇದರಲ್ಲಿ ಕೆತ್ತಲಾದ ವಿವಿಧ ರೀತಿಯ ಕೆತ್ತನೆಗಳು ಮನಸೆಳೆಯುತ್ತದೆ. ದೇವರ ವಿಗ್ರಹಕ್ಕೆ ಎದುರಾಗಿರುವ ಮುಖಮಂಟಪದಲ್ಲಿ ಸುಂದರವಾದ ಬಸವನನ್ನು ಕೆತ್ತಲಾಗಿದೆ. ದೇವಾಲಯದ ಮುಖ್ಯದ್ವಾರವು ಪಡುವಣ ದಿಕ್ಕಿಗೆ ಇರುವುದು ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವಾಗಿದೆ.

ADVERTISEMENT

ಮಹಾಲಿಂಗೇಶ್ವರ ದೇವಾಲಯವು ಬಲು ಪ್ರಾಚೀನವಾದುದು ಎಂದು ಹೇಳಲಾಗುತ್ತದೆ. ಕ್ರಿ. ಶ. 11ನೇ ಶತಮಾನಕ್ಕೆ ಹಿಂದೆಯೇ ಇದನ್ನು ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ದೇವಾಲಯದಲ್ಲಿ 11ನೇ ಶತಮಾನದ ಶಿಲಾಶಾಸನವಿದ್ದು, ಅದರಲ್ಲಿ ಪಾಲಯೂರು ಎಂದು ಬರೆಯಲಾಗಿದೆ. ಈ ದೇವಾಲಯದ ಆದಿದೈವ ಪಾಲೂರಪ್ಪನಾಗಿದ್ದು, ಇವರು ಮೂಲತಃ ಕೇರಳದವರು ಎಂದು ಹೇಳಲಾಗಿದೆ.

ಪಾಡಿಯ ಇಗ್ಗುತ್ತಪ್ಪನೂ ಸೇರಿದಂತೆ ತನ್ನ ಐವರು ಸೋದರರ ನಡುವಿನ ವೈಮನಸ್ಯದಿಂದಾಗಿ ಇಲ್ಲಿಗೆ ಬಂದು ನೆಲೆಯೂರಿದರು ಎನ್ನುವುದು ಪ್ರಚಲಿತದಲ್ಲಿರುವ ಕಥೆಯಾಗಿದೆ. ಕೇರಳದ ವೀರವರ್ಮ, ತಮಿಳುನಾಡಿನ ಪಾಂಡ್ಯ ಅರಸು, ಕೊಡಗಿನ ಲಿಂಗರಾಜ ಮೊದಲಾದವರ ಕಾಲದಲ್ಲಿ ಈ ದೇವಾಲಯ ಮತ್ತಷ್ಟು ಸುಧಾರಣೆ ಕಂಡಿದೆ. ಇಲ್ಲಿರುವ ಶಾಸನದ ಪ್ರಕಾರ ದೇವಾಲಯದ ಪೂರ್ಣ ಆಡಳಿತವನ್ನು ಶ್ರೀ ವೈಷ್ಣವ ಒಕ್ಕೂಟಕ್ಕೆ ನೀಡಿದ ಬಗ್ಗೆ ಹೇಳಲಾಗಿದೆ. ದಾನಿಗಳ ನೆರವಿನಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆದಿದೆ. ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಇಲ್ಲಿ ವಾರ್ಷಿಕ ಉತ್ಸವ ನಡೆಯುತ್ತದೆ. ಪಾರ್ವತಿ ಪರಮೇಶ್ವರರ ಜೋಡು ನೃತ್ಯಬಲಿ ನಡೆಯುವುದು ಉತ್ಸವದ ವಿಶೇಷತೆ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.