ಗೋಣಿಕೊಪ್ಪಲು: ವಿರಾಜಪೇಟೆ ಉಪ ವಿಭಾಗದ ಪೊಲೀಸರ ಕೆಸರು ಗದ್ದೆ ಕ್ರೀಡಾಕೂಟ ಗೋಣಿಕೊಪ್ಪಲಿನ ಕಾಳಪ್ಪ ಅವರ ಗದ್ದೆಯಲ್ಲಿ ಭಾನುವಾರ ನಡೆಯಲಿದೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಆಯೋಜಿಸಿರುವ ಪೊಲೀಸರ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ. ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲುಕಿನ ಅಂದಾಜು 200 ಪೊಲೀಸರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಿವೈಎಸ್ ಪಿ ಎಸ್.ಮಹೇಶ್ ಕುಮಾರ್ ತಿಳಿಸಿದರು.
‘ಪುರುಷ ಪೊಲೀಸ್ ಹಾಗೂ ಮಹಿಳಾ ಪೊಲೀಸ್ ಎಂಬ ಎರಡು ವಿಭಾಗದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ಪುರುಷರಿಗೆ ವಾಲಿಬಾಲ್, ಕಬಡ್ಡಿ, ಓಟದ ಸರ್ಧೆ, ಮಹಿಳೆಯರಿಗೆ ಥ್ರೋಬಾಲ್, ಪೊಲೀಸ್ ಹುದ್ದೆಯಲ್ಲಿರುವ ದಂಪತಿಗೆ ಕಪಲ್ ರೇಸ್, ಪೊಲೀಸರ ಮಕ್ಕಳಿಗೆ ಓಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ’ ಎಂದು ವೀರಾಜಪೇಟೆ ಗ್ರಾಮಾಂತರ ಪಿಎಸ್‌ಐ ಲತಾ ಹೇಳಿದರು.
‘ಬೆಳಿಗ್ಗೆ 10ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ವೀರಾಜಪೇಟೆ ಪೊಲೀಸ್ ಡಿವೈಎಸ್ ಪಿ ಮಹೇಶ್ಕುಮಾರ್, ಸಿಪಿಐ ಅನೂಪ್ ಮಾದಪ್ಪ, ಶಿವರುದ್ರ, ಶಿವರಾಜ್ ಮುಧೋಳ್, ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.