ADVERTISEMENT

ಮಡಿಕೇರಿಯಲ್ಲಿ ಪತ್ರಕರ್ತರ ಮೇಲೆ ಪೊಲೀಸರಿಂದ ಹಲ್ಲೆಗೆ ಯತ್ನ

ರಾಜ್ಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಘಟನೆಗೆ ಖಂಡನೆ, ಕ್ರಮಕ್ಕೆ ಆಗ್ರಹಿಸಿ ಎಸ್‌ಪಿಗೆ ದೂರು

​ಪ್ರಜಾವಾಣಿ ವಾರ್ತೆ
Published 28 ಮೇ 2021, 10:07 IST
Last Updated 28 ಮೇ 2021, 10:07 IST
ಪತ್ರಕರ್ತರನ್ನು ಪೊಲೀಸರು ತಳ್ಳುತ್ತಿರುವ ದೃಶ್ಯ 
ಪತ್ರಕರ್ತರನ್ನು ಪೊಲೀಸರು ತಳ್ಳುತ್ತಿರುವ ದೃಶ್ಯ    

ಮಡಿಕೇರಿ: ಇಲ್ಲಿನ ಸೇನಾ ಕ್ಯಾಂಟೀನ್‌ ಬಳಿ ಶುಕ್ರವಾರ ಬೆಳಿಗ್ಗೆ ವರದಿಗೆ ತೆರಳಿದ್ದ ಇಬ್ಬರು ಪತ್ರಕರ್ತರ ಮೇಲೆ ಪೊಲೀಸರು, ಕ್ಯಾಂಟೀನ್‌ ಸಿಬ್ಬಂದಿ ಹಾಗೂ ಸಾರ್ವಜನಿಕರೊಬ್ಬರು ಹಲ್ಲೆಗೆ ಯತ್ನಿಸಿದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಪತ್ರಕರ್ತರಾದ ಜಿ.ಆರ್‌.ಪ್ರಜ್ಞಾ ಹಾಗೂ ಜಿ.ಆರ್‌.ಪ್ರಜ್ವಲ್‌ ಅವರು ಕ್ಯಾಂಟೀನ್‌ ಬಳಿ ಜನದಟ್ಟಣೆಯ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸುತ್ತಿದ್ದರು. ಪೊಲೀಸರು ಅಲ್ಲಿಂದ ತೆರಳುವಂತೆ ಗದರಿಸಿದ್ದಾರೆ. ಅಲ್ಲದೇ, ಗುರುತಿನ ಚೀಟಿ ತೋರಿಸಬೇಕೆಂದು ಏಕವಚನದಲ್ಲಿ ನಿಂದಿಸಿ, ಮೊಬೈಲ್‌ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಮಹಿಳಾ ಪತ್ರಕರ್ತೆಯೊಂದಿಗೆ ಅಮಾನವೀಯವಾಗಿ ವರ್ತಿಸಿ ಹೊರಗೆ ದಬ್ಬಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ವಿಡಿಯೊ ವೈರಲ್‌ ಆಗಿದೆ. ಘಟನೆಯನ್ನು ರಾಜ್ಯ ಪತ್ರಕರ್ತರ ಸಂಘ ಹಾಗೂ ಕೊಡಗು ಜಿಲ್ಲಾ ಪತ್ರಕರ್ತ ಸಂಘವು ಖಂಡಿಸಿದೆ.

ಕೋವಿಡ್‌ನ ಆತಂಕದ ಸಮಯದಲ್ಲಿ ಪತ್ರಕರ್ತರೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರ ವರ್ತನೆ ಅಕ್ಷಮ್ಯ. ಹಲ್ಲೆಗೆ ಯತ್ನಿಸಿದ ಪೊಲೀಸ್‌ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಪತ್ರಕರ್ತರ ಸಂಘದ ಪದಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರಿಗೆ ದೂರು ನೀಡಿದ್ದಾರೆ.

ADVERTISEMENT

ಪರಿಶೀಲಿಸಿ ಕ್ರಮ: ‘ಘಟನೆಯ ವಿವರವನ್ನು ಕೇಳಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್‌ಪಿ ಅವರು ಭರವಸೆ ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಮಡಿಕೇರಿ ಹಾಗೂ ವಿರಾಜಪೇಟೆ ಸೇನಾ ಕ್ಯಾಂಟೀನ್‌ನಲ್ಲಿ ವಸ್ತುಗಳ ಖರೀದಿಗೆ ದೊಡ್ಡ ಸಂಖ್ಯೆಯಲ್ಲಿ ಮಾಜಿ ಸೈನಿಕರು ಹಾಗೂ ಅವರು ಕುಟುಂಬಸ್ಥರು ಜಮಾಯಿಸಿದ್ದರು. ಅಲ್ಲಿ ಯಾವುದೇ ಮಾರ್ಗಸೂಚಿಗಳು ಪಾಲನೆ ಆಗುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.