ಗೋಣಿಕೊಪ್ಪಲು: ಗಾಂಧಿ ಮೆಟ್ಟಿದ ನೆಲ ಪೊನ್ನಂಪೇಟೆ. ಸ್ವಾತಂತ್ರ್ಯ ಚಳುವಳಿಯನ್ನು ಮುಖ್ಯ ಗುರಿಯಾಗಿಸಿಕೊಂಡಿದ್ದ ಗಾಂಧೀಜಿ ದೇಶದ ಬಹು ಮುಖ್ಯ ಸ್ಥಳಗಳಿಗೆ ಭೇಟಿ ನೀಡಿದ್ದರು. ಅಂತಹ ಸ್ಥಳಗಳಲ್ಲಿ ದಕ್ಷಿಣ ಕೊಡಗಿನ ಪೊನ್ನಂಪೇಟೆಯೂ ಒಂದು.
ಕೇರಳದ ಮಾರ್ಗವಾಗಿ 1934 ಫೆ.22 ರಂದು ಪೊನ್ನಂಪೇಟೆಗೆ ಬಂದಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ತಂಗಿದ್ದರು. ಇವರನ್ನು ‘ಕೊಡಗಿನ ಗಾಂಧಿ’ ಎಂದೇ ಕರೆಸಿಕೊಳ್ಳುತ್ತಿದ್ದ ಅಪ್ರತಿಮ ದೇಶಭಕ್ತ ಪಂದ್ಯಂಡ ಬೆಳ್ಳಿಯಪ್ಪ ಗಾಂಧೀಜಿಯವರನ್ನು ಕೇರಳದಿಂದ ತಮ್ಮ ಕಾರಿನಲ್ಲಿ ಕರೆತಂದಿದ್ದರು. ಇಂಗ್ಲಿಷ್ ಮತ್ತು ಹಿಂದಿಯನ್ನು ಚನ್ನಾಗಿ ಮಾತನಾಡುತ್ತಿದ್ದ ಪುತ್ತಾಮನೆ ಪೊನ್ನಮ್ಮ ಸ್ಥಳೀಯವಾಗಿ ಗಾಂಧೀಜಿಯವರಿಗೆ ಊಟ ಉಪಚಾರಗಳಲ್ಲಿ ನೆರವಾದರು.
ಫೆ.23ರಂದು ಗಾಂಧೀಜಿಯವರು ರಾಮಕೃಷ್ಣ ಆಶ್ರಮದ ಸಮೀಪವಿದ್ದ ಗದ್ದೆ ಬಯಲಿನಲ್ಲಿ ಜನರನ್ನು ಉದ್ದೇಶಿಸಿ ಸ್ವಾತಂತ್ರ್ಯ ಚಳವಳಿಯ ಭಾಷಣ ಮಾಡಿದರು. ಗಾಂಧೀಜಿಯವರು ಪೊನ್ನಂಪೇಟೆಗೆ ಆಗಮಿಸಿದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು.
ಮಹಾತ್ಮನನ್ನು ಕಣ್ಣಾರೆ ಕಂಡು ಅವರ ಮಾತುಗಳನ್ನು ಕೇಳುವುದಕ್ಕಾಗಿ ನಾನಾ ಭಾಗಗಳಿಂದ ಮಹಿಳೆಯರು ಪುರುಷರೆಲ್ಲ ಕೂಡಿ ಎತ್ತಿನ ಗಾಡಿ ಹಾಗೂ ಕಾಲು ನಡಿಗೆಯಲ್ಲಿ ಸಾಲು ಗಟ್ಟಿ ಬಂದರು.
ಗಾಂಧೀಜಿಯವರ ಭಾಷಣ ಕೇಳಿದ ಜನತೆ ಜಯಕಾರ ಹಾಕಿದರು. ‘ನಾವು ನೊಮ್ಮೊಂದಿಗಿದ್ದೇವೆ’ ಎಂದು ಘೋಷಣೆ ಕೂಗಿದರು. ಬಳಿಕ, ಗಾಂಧಿ ಮಹಾತ್ಮ ಭಾಷಣ ಮುಗಿಸಿ ಹೊರಟಾಗ ಸಾಗರದಂತೆ ಸೇರಿದ್ದ ಜನತೆ ಕಣ್ಣೀರು ಹಾಕಿ ಮಹಾತ್ಮನನ್ನು ಬೀಳ್ಕೊಟ್ಟರು.
ಮಹಾತ್ಮನ ಹೆಜ್ಜೆ ಗುರುತಿನ ನೆನಪು ಈಗಲೂ ಪೊನ್ನಂಪೇಟೆಯಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಪ್ರತಿಮೆಯನ್ನು ಪೊನ್ನಂಪೇಟೆ ಮುಖ್ಯ ರಸ್ತೆ ಬದಿಯಲ್ಲಿ ಸ್ಥಾಪಿಸಲಾಗಿದೆ. ಈ ಪ್ರತಿಮೆಗೆ ಇಲ್ಲಿನ ಹಿರಿಯರು ಪ್ರತಿ ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಹಾಗೂ ಗಣರಾಜ್ಯೋತ್ಸವ ಮತ್ತಿತರ ಮುಖ್ಯವಾದ ದಿನದಂದು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸುತ್ತಿದ್ದಾರೆ.
ಗಾಂಧೀಜಿ ಭಾಷಣ ಮಾಡಿದ ಗದ್ದೆಗೆ ಈಗಲೂ ‘ಗಾಂಧಿ ಗದ್ದೆ’ ಎಂದೇ ಕರೆಯಲಾಗುತ್ತದೆ. ಸ್ವಾತಂತ್ರ್ಯ ಪ್ರೇಮಿಗಳಾದ ಪೊನ್ನಂಪೇಟೆ ಜನತೆ ಹಿರಿಯರೊಡಗೂಡಿ ಸ್ವಾತಂತ್ರ್ಯ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾ ಬಂದಿದ್ದಾರೆ. ಎಲ್ಲೆಲ್ಲೂ ಭಾರತದ ಭೂಪಟ ಬಿಡಿಸಿ ಅದರೊಂದಿಗೆ ತ್ರಿವರ್ಣ ಧ್ವಜವನ್ನು ವರ್ಣರಂಜಿತವಾಗಿ ರಚಿಸುತ್ತಾರೆ. ಜತೆಗೆ ಕಟ್ಟಡ, ಅಂಗಡಿ ಮುಂಗಟ್ಟು, ,ಮನೆ, ವಾಹನಗಳಲೆಲ್ಲ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಾರೆ.
ಗಾಂಧೀಜಿ ಹೊತ್ತಿಸಿದ ಸ್ವಾತಂತ್ರ್ಯ ಚಳುವಳಿಯ ಕಿಚ್ಚಿನಿಂದ ಬಾಳೆಲೆಯ ಪಾರುವಂಗಡ ಕುಶಾಲಪ್ಪ ಅವರ ನೇತೃತ್ವದಲ್ಲಿ ವಿದೇಶಿ ಬಟ್ಟೆ ಸುಟ್ಟು ಸ್ವದೇಶಿ ಉಡುಪು ತೊಡುವ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮವೂ ಪೊನ್ನಂಪೇಟೆಯಲ್ಲಿ ನಡೆಯುತ್ತದೆ. ವಿದೇಶಿ ಬಟ್ಟೆ ಸುಟ್ಟ ನೆನಪಿಗಾಗಿ ಪೊನ್ನಂಪೇಟೆಯ ಮತ್ತೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸ್ವಾತಂತ್ರ್ಯ ಚಳುವಳಿಯ ನೆನಪಿನ ಸ್ತಂಭ ಸ್ಥಾಪಿಸಲಾಗಿದೆ. ಅದರ ಮೇಲೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಆರೋಗ್ಯ ಕೆಡೆಸಿಕೊಂಡು ಮಡಿದ ವೀರ ಸ್ವಾತಂತ್ರ್ಯ ಯೋಧ ಪಾರುವಂಗಡ ಕುಶಾಲಪ್ಪ ಅವರ ಹೆಸರನ್ನು ಕೆತ್ತಲಾಗಿದೆ.
ಸ್ವಾತಂತ್ರ್ಯ ಬಂದ ದಿನದ ನೆನಪು
ಸ್ವಾತಂತ್ರ್ಯ ಬಂದ ದಿನದ ನೆನಪಿನ ಕುರಿತು ಹಿರಿಯರು ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ಜಿಮ್ಮಿ ಅಣ್ಣಯ್ಯ ಅವರನ್ನು ಕೇಳಿದಾಗ ಅವರು ಸ್ವಾತಂತ್ರ್ಯ ಬಂದಾಗಿನ ನೆನಪುಗಳನ್ನು ಬಿಡಿಸಿಟ್ಟರು. ‘ಗಾಂಧೀಜಿಯವರನ್ನು ನಾನು ಕಣ್ಣಾರೆ ಕಂಡಿದ್ದೆ. ನಾನು ಆಗ 14ರ ಹರೆಯದವನು. ಗಾಂಧೀಜಿ ಬಂದು ಹೋದಾಗಿನಿಂದಲೂ ಅವರ ಮಾತಿನ ಗುಂಗಿನಲ್ಲೇ ಇದ್ದ ನಮಗೆ ಬಾರತಕ್ಕೆ ಸ್ವಾತಂತ್ರ್ಯ ಲಭಿಸಿತು ಎಂದಾಗ ಸಂತೋಷದ ಕಟ್ಟೆ ಎಲ್ಲೆ ಮೀರಿತು. 1947 ಆ.14ರ ರಾತ್ರಿ ಯಾರೂ ಮಲಗಲಿಲ್ಲ. ಪ್ರತಿ ಮನೆಯ ಮುಂದೆ ರಂಗೋಲಿ ಕಂಗೊಳಿಸಿದವು. ಎಣ್ಣೆಯಿಂದ ಹಚ್ಚಿದ ದೀಪಗಳು ಬೆಳಗತೊಡಗಿದವು. ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಿದವು. ಎಲ್ಲರ ಕೈಯಲ್ಲೂ ಧ್ವಜ ಮಹಾತ್ಮನ ಫೋಟೊ ಹಿಡಿದ ಯುವಕರು ಜಯಕಾರ ಹಾಕುತ್ತಾ ನಡೆಸಿದ ಮೆರವಣಿಗೆ ಇಂದಿಗೂ ಕಿವಿಯಲ್ಲಿ ಮೊಳಗಿದಂತಿದೆ. ಹಿಂದು ಮುಸಲ್ಮಾನರೆಲ್ಲ ಪರಸ್ಪರ ಸಿಹಿ ಹಂಚುತ್ತಾ ಪರಸ್ಪರ ಆಲಿಂಗಿಸಿಕೊಳ್ಳುತ್ತಿದ್ದ ದೃಶ್ಯ ಭಾರತ ಮಾತೆಯ ಅಭೂತ ಪೂರ್ವ ಗೆಲುವಿನ ಸಂಭ್ರಮವಾಗಿತ್ತು. ಆ ನೆನಪಿನಲ್ಲಿ ನಾನು ಇಂದಿಗೂ ಬದುಕಿರುವುದೇ ಒಂದು ಸಂತೋಷ. ಪ್ರತಿ ಬಾರಿಯ ಸ್ವಾತಂತ್ರ್ಯೋತ್ಸವ ನೆನಪು ನನ್ನನ್ನು ಮೊದಲ ಸ್ವಾತಂತ್ರ್ಯ ದಿನಕ್ಕೆ ಕೊಂಡೊಯುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.