ADVERTISEMENT

ಸೆರೆ ಸಿಕ್ಕಿದ್ದು ನರಭಕ್ಷಕ ಹುಲಿಯೇ?

ಪೊನ್ನಂಪೇಟೆ: ಹುಲಿ ದಾಳಿಗೆ ಇಬ್ಬರ ಬಲಿ, ಸ್ಥಳೀಯರ ಆತಂಕ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 23:03 IST
Last Updated 21 ಫೆಬ್ರುವರಿ 2021, 23:03 IST
ಬಲೆಯಲ್ಲಿ ಬಂಧಿಸಿ ಹುಲಿಯನ್ನು ಹೊತ್ತು ತರಲಾಯಿತು
ಬಲೆಯಲ್ಲಿ ಬಂಧಿಸಿ ಹುಲಿಯನ್ನು ಹೊತ್ತು ತರಲಾಯಿತು   

ಪೊನ್ನಂಪೇಟೆ: ಮಂಚಳ್ಳಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಹೆಣ್ಣು ಹುಲಿಯನ್ನು (ಅಂದಾಜು 10 ವರ್ಷ ಪ್ರಾಯ) ಭಾನುವಾರ ಸಂಜೆಯ ವೇಳೆಗೆ ಸೆರೆ ಹಿಡಿದಿದ್ದರೂ ಸ್ಥಳೀಯರ ಆತಂಕ ದೂರವಾಗಿಲ್ಲ. ಇದೇ ಹುಲಿಯೇ ಇಬ್ಬರ ಮೇಲೆ ದಾಳಿ ನಡೆಸಿದ್ದು ಎಂಬುದನ್ನು ಅರಣ್ಯಾಧಿಕಾರಿಗಳೂ ಖಚಿತಪಡಿಸಿಲ್ಲ. ಹೀಗಾಗಿ, ದಕ್ಷಿಣ ಕೊಡಗಿನ ಜನರಲ್ಲಿ ದುಗುಡ ಉಳಿದಿದೆ.

ಹೆಣ್ಣು ಹುಲಿಯನ್ನು, ಹಿಡಿದು ಮೈಸೂರು ಹುಲಿ ಪುನಶ್ಚೇತನ ಶಿಬಿರಕ್ಕೆ ರವಾನಿಸಲಾಗಿದೆ. ಆದರೆ, ಈ ಹುಲಿ ನರಭಕ್ಷಕ ಎಂಬುವುದು ಧೃಡಪಟ್ಟಿಲ್ಲ. ಹುಲಿಗೆ ಬಲಿಯಾದ ಅಯ್ಯಪ್ಪ ಎಂಬ ಬಾಲಕನ ಮೇಲೆ ದಾಳಿ ನಡೆಸಿದ್ದ 48 ಗಂಟೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಸಾಕಾನೆ ಸಹಕಾರದಲ್ಲಿ ಕೂಂಬಿಂಗ್ ನಡೆಸಿ ಹುಲಿ ಸೆರೆ ಹಿಡಿಯಲಾಗಿದೆ. ನರಭಕ್ಷಕ ಹುಲಿ ಎಂಬುವುದು‌ ಧೃಡಪಟ್ಟಿಲ್ಲ ಖಚಿತವಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಹೇಗಿತ್ತು ಕಾರ್ಯಾಚರಣೆ?: ಭಾನುವಾರ ಬೆಳಿಗ್ಗೆಯಿಂದಲೂ ಕಾರ್ಯಾಚರಣೆ ನಡೆದರೂ ಅರಣ್ಯ ಇಲಾಖೆಯ ತಂಡದ ಕಣ್ಣಿಗೆ ಹುಲಿ ಬಿದ್ದಿರಲಿಲ್ಲ. ಆದರೆ, ಸಂಜೆ ವೇಳೆಗೆ ಮಂಚಳ್ಳಿಯ ಕಾಫಿ ತೋಟದಲ್ಲಿ ಅವಿತಿದ್ದ ಹೆಣ್ಣು ಹುಲಿ ಸೆರೆ ಹಿಡಿಯಲಾಯಿತು. ಸ್ಥಳದಲ್ಲಿದ್ದ ವೈದ್ಯ ಮುಜೀಬ್‌ ಅವರು ಹುಲಿಗೆ ಅರಿವಳಿಕೆ ಚುಚ್ಚುಮದ್ದು ಹಾರಿಸಿ, ಪ್ರಜ್ಞೆ ತಪ್ಪಿಸಿದ ಬಳಿಕ ಬಲೆ ಹಾಕಿ ಹುಲಿ ಸೆರೆ ಹಿಡಿಯಲಾಯಿತು. ನಂತರ, ಬೋನಿನಲ್ಲಿ ಹಾಕಿ ಮೈಸೂರಿಗೆ ರವಾನೆ ಮಾಡಲಾಯಿತು. ಮತ್ತಿಗೋಡು ಶಿಬಿರದ ಎರಡು ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.

ADVERTISEMENT

ಶನಿವಾರ ಸಂಜೆ ಸೌದೆ ತರಲು ತೋಟಕ್ಕೆ ತೆರಳಿದ್ದ ಕುಮಟೂರು ಗ್ರಾಮದ ಪಣಿ ಯರವರ ಅಯ್ಯಪ್ಪ (14) ಎಂಬ ಬಾಲಕನ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿತ್ತು. ಭಾನುವಾರ ಬೆಳಿಗ್ಗೆ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಕಾರ್ಮಿಕ ಮಹಿಳೆ ಚಿಣ್ಣಿ (60) ಅವರ ಮೇಲೆ ದಾಳಿ ನಡೆಸಿ, ಬಲಿ ಪಡೆದಿತ್ತು. ಪುತ್ರ ಅಪ್ಪು ಮತ್ತು ಪತಿ ಬೊಳಕ ಕಣ್ಣ ಮುಂದೆಯೇ ಈ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಅಣಬೆ ಹುಡುಕಲು ಹೋಗಿದ್ದಾಗ ಘಟನೆ ನಡೆದಿದೆ. ದಾಳಿ ನಡೆಸಿ ಹುಲಿ ದೇಹವನ್ನು ಎಳೆದೊಯ್ಯುತ್ತಿದ್ದ ಸಂದರ್ಭ ಇತರ ಕಾರ್ಮಿಕರು ಕಿರುಚಿಕೊಂಡಾಗ ಹುಲಿ ಓಡಿಹೋಗಿದೆ. ದೇಹವನ್ನು ರಸ್ತೆಯಿಂದ ಸುಮಾರು 50 ಮೀಟರ್‌ ದೂರಕ್ಕೆ ಎಳೆದೊಯ್ದಿತ್ತು. ಮೃತ ಕಾರ್ಮಿಕ ಮಹಿಳೆ ಚಿಣ್ಣಿ ಅವರು ಗ್ರಾಮದ ಆಲೇಮಾಡ ಸೋಮಣ್ಣ ಬೋಪಣ್ಣ ಅವರ ಲೈನ್‌ಮನೆಯಲ್ಲಿ ವಾಸವಾಗಿದ್ದರು. ಮಹಿಳೆಯ ತಲೆಯ ಹಿಂಭಾಗಕ್ಕೆ ದಾಳಿ ಮಾಡಿದ್ದು ಕಂಡು ಬಂದಿದೆ.

ತರಾಟೆ:‌ ಐದು ತಿಂಗಳಿಂದ ಈ ಭಾಗದಲ್ಲಿ ಹುಲಿಯು ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಇಬ್ಬರು ಬಲಿಯಾಗಬೇಕಾಯಿತು ಎಂದು ಆರೋಪಿಸಿದ ರೈತ ಸಂಘದ ಕಾರ್ಯಕರ್ತರು, ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.

ಸೆರೆಗೆ ಸಾಕಾನೆ ಬಳಕೆ

ಹುಲಿ ಸೆರೆಹಿಡಿಯಲು ಕೊಡಗು ವೃತ್ತ ಸಿಸಿಎಫ್ ಗೆ ಸಂಪೂರ್ಣ ಅಧಿಕಾರವನ್ನು ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ್ದರು. ಹುಲಿ ಸೆರೆ ಕಾರ್ಯಾಚರಣೆಗೆ ತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ, ಮಹೇಂದ್ರ ಆನೆಗಳನ್ನು ಕರೆತರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.