ADVERTISEMENT

ಗೋಣಿಕೊಪ್ಪಲು ದಸರಾ ಯಶಸ್ಸಿಗೆ ಸಿದ್ಧತೆ

ಜೆ.ಸೋಮಣ್ಣ
Published 17 ಸೆಪ್ಟೆಂಬರ್ 2025, 4:25 IST
Last Updated 17 ಸೆಪ್ಟೆಂಬರ್ 2025, 4:25 IST
ಕುಲ್ಲಚಂಡ ಪ್ರಮೋದ್ ಗಣಪತಿ 
ಕುಲ್ಲಚಂಡ ಪ್ರಮೋದ್ ಗಣಪತಿ    

ಗೋಣಿಕೊಪ್ಪಲು: ಇಲ್ಲಿನ ಕಾವೇರಿ ದಸರಾ ಸಮಿತಿ ವತಿಯಿಂದ ನಡೆಯುವ 47ನೇ ವರ್ಷದ ದಸರಾ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಸ್ಥೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆದ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಟೊಂಕಕಟ್ಟಿ ನಿಂತಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕಂದ ದೇವಯ್ಯ, ಉಪಾಧ್ಯಕ್ಷರಾಗಿ ಶಿವಾಜಿ, ಸದಸ್ಯರಾಗಿ ಚಂದನಾ ಮಂಜುನಾಥ್, ಚಂದನ್ ಜವಾಬ್ದಾರಿ ಹೊತ್ತಿದ್ದಾರೆ.

11 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಪ್ರತಿ ದಿನ ಸಂಜೆ 6ರಿಂದ ರಾತ್ರಿ 11 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಇದರಲ್ಲಿ ಕನ್ನಡ, ಕೊಡವ, ಮಲೆಯಾಳ ಮೊದಲಾದ ಭಾಷೆಗಳ ನಾಟಕ, ಸಂಗೀತ, ಯುವ ದಸರಾ ನೃತ್ಯೋತ್ಸವ ಕಾರ್ಯಕ್ರಮಗಳು ಜರುಗಲಿವೆ. ದೇಸಿ ಕಲೆಗಳಾದ ಜಾನಪದ ನೃತ್ಯ, ಹಾಡು ಮೊದಲಾದವು ರಂಜಿಸಲಿವೆ.

ಹಗಲಿನ ವೇಳೆ ಮಕ್ಕಳ ದಸರಾ, ಮಹಿಳಾ ದಸರಾದೊಂದಿಗೆ ಕಬಡ್ಡಿ ಮೊದಲಾದ ಕ್ರೀಡಾಕೂಟ ನಡೆಯಲಿವೆ. ಮಕ್ಕಳ ದಸರಾ ಸಮಿತಿ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ಬಹುಮಾನ ನೀಡುವ ಮೂಲಕ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಮತ್ತು ದಸರಾ ಉತ್ಸವಕ್ಕೆ ಹೊಸಕಳೆ ಮೂಡಿಸುವತ್ತ ಚಿತ್ತ ಹರಿಸಿದ್ದಾರೆ.

ADVERTISEMENT

ಮತ್ತೊಂದು ದಿನ ಮಹಿಳಾ ದಸರಾ ಕೂಡ ಆಯೋಜನೆಗೊಳ್ಳುತ್ತಿದೆ. ಮಹಿಳಾ ಸಮಿತಿ ಅಧ್ಯಕ್ಷೆಯೂ ಆಗಿರುವ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮುಂಜಳಾ ಮಹಿಳೆಯರಿಗೆ ವಿವಿಧ ಕ್ರೀಡಾಕೂಟ ಏರ್ಪಡಿಸಿ ರಂಜಿಸಲಿದ್ದಾರೆ. ಜತೆಗೆ ತಿನಿಸು ತಿಂಡಿಗಳ ಸ್ಪರ್ಧೆ, ಮಹಿಳಾ ನೃತ್ಯ, ಜಾನಪದ ಮತ್ತು ಭಾವಗೀತೆಗಳ ಸ್ಪರ್ಧೆ ಮೊದಲಾದವುಗಳನ್ನು ಆಯೋಜಿಸುತ್ತಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳ ಜತೆಯಲ್ಲಿಯೇ ಬೈಕ್ ರೇಸ್, ಕಾರು ರೇಸ್ ಸ್ಪರ್ಧೆಗಳು ನಡೆಯಲಿವೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ ದಸರಾ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರತಿ ದಿನ ಸಂಜೆ ಸ್ಥಳೀಯ ಕಲಾವಿದರಿಂದ ನೃತ್ಯ, ಸಂಗೀತ, ಭರತನಾಟ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಇದಕ್ಕಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಭಾಂಣ ನಿರ್ಮಾಣಗೊಳ್ಳುತ್ತಿದೆ. ವಿವಿಧ ಸಮಿತಿಗಳ ಸಭೆಗಳೂ ನಡೆಯುತ್ತಿವೆ.

ಹೊಸತನವಿಲ್ಲ: ಇಷ್ಟೆಲ್ಲ ಸಿದ್ಧತೆಗಳು ನಡೆಯುತ್ತಿದ್ದರೂ ಗೋಣಿಕೊಪ್ಪಲು ದಸರಾ ಉತ್ಸವದಲ್ಲಿ ಯಾವುದೇ ಹೊಸತನಗಳಿಲ್ಲ. ಎರಡು ಮೂರು ವರ್ಷದಿಂದ ಇದ್ದ ಸಮಿತಿ ಸದಸ್ಯರು ಮತ್ತು ಅಧ್ಯಕ್ಷರೇ ಈ ಬಾರಿಯೂ ಕೂಡ ಸಮಿತಿಯಲ್ಲಿದ್ದಾರೆ. ಯಾವುದೇ ಬದಲಾವಣೆಯಾಗಲ್ಲ. ಹೀಗಾಗಿ ಹಿಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳೇ ಈ ಬಾರಿಯೂ ಇರಲಿವೆ. ಇದರಿಂದ ಜನತೆಗೆ ಬೇಸತ್ತು ಹೋಗಿದೆ ಎಂಬುದು ಸಾರ್ವಜನಿಕರ ದೂರು.

ಸಮಿತಿಗಳಿಂದ ಉತ್ತಮ ಕೆಲಸ

ದಸರಾ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸಲಾಗುತ್ತಿದೆ. 47ನೇ ವರ್ಷದ ದಸರಾ ಉತ್ಸವವನ್ನು ಸ್ಮರಣೀಯವಾಗಿಸಲು ಶಾಸಕ ಎ.ಎಸ್.ಪೊನ್ನಣ್ಣ ಅವರೂ ಒತ್ತಾಸೆಯಾಗಿ ನಿಂತಿದ್ದಾರೆ. ಇದಕ್ಕಾಗಿ ಹಲವು ಸಮಿತಿಗಳನ್ನು ರಚಿಸಿದ್ದು ಅವರೆಲ್ಲ ಈಗಾಗಲೆ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಅನುಭವಿ ಸಮಿತಿ ಸದಸ್ಯರ ಮತ್ತು ಅಧ್ಯಕ್ಷರ ಸಲಹೆ ಪಡೆದು ಈ ಬಾರಿ ಉತ್ತಮ ಕಾರ್ಯಕ್ರಮ ನೀಡಲು ಚಿಂತನೆ ನಡೆಸಲಾಗಿದೆ. -ಕುಲ್ಲಚಂಡ ಪ್ರಮೋದ್ ಗಣಪತಿ ಗೋಣಿಕೊಪ್ಪಲು ದಸರಾ ಸಿದ್ಧತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.