ಮಡಿಕೇರಿ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗಾಗಿ ಕೊಡಗು ಜಿಲ್ಲೆ ಸಜ್ಜಾಗುತ್ತಿದೆ. ಸೆ. 15ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಗಾಂಧಿ ಭವನದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಮಾತ್ರವಲ್ಲ, ವಿವಿಧ ಸ್ಪರ್ಧೆಗಳಿಗೆ ಚಾಲನೆಯನ್ನೂ ನೀಡಲಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಚಿತ್ರಕಲಾ ಸ್ಪರ್ಧೆ, ಛಾಯಾಗ್ರಹಣ ಸ್ಪರ್ಧೆ ಹಾಗೂ ಭಾಷಣಸ್ಪರ್ಧೆಗಳು ನಡೆಯಲಿವೆ.
‘ನನ್ನ ಮತ ನನ್ನ ಹಕ್ಕು’ ವಿಷಯ ಕುರಿತು ಚಿತ್ರಕಲೆ ಸ್ಪರ್ಧೆಯು 6–8 ನೇ ತರಗತಿ ಮತ್ತು 9–12ನೇ ತರಗತಿ ವಿಭಾಗದಲ್ಲಿ ನಡೆಯಲಿದೆ. ಇದೇ ವಿಷಯ ಕುರಿತು ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಛಾಯಾಗ್ರಹಣ ಸ್ಪರ್ಧೆಯೂ ಇರಲಿದೆ. ಛಾಯಾಚಿತ್ರಗಳನ್ನು https://democracydaykarnataka.in ಗೆ ಅಪ್‌ಲೋಡ್ ಮಾಡಬೇಕಿದೆ. ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳಿಗಾಗಿ ‘ನನ್ನ ಮತ ನನ್ನ ಹಕ್ಕು’, ‘ಭಾರತ ಸಂವಿಧಾನದ ಪೀಠಿಕೆಯ ಮಹತ್ವ’, ‘ಮಹಾತ್ಮ ಗಾಂಧೀಜಿ ಅವರ ದೃಷ್ಟಿಕೋನದಲ್ಲಿ ಗಾಂಧಿ ಭಾರತ’– ಈ 3 ವಿಷಯದಲ್ಲಿ ಒಂದು ವಿಷಯ ಕುರಿತು ಭಾಷಣ ಸ್ಪರ್ಧೆ ನಡೆಯಲಿದೆ.
ಈ ಮೂರೂ ಸ್ಪರ್ಧೆಗಳಲ್ಲೂ ತಾಲ್ಲೂಕುಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ₹ 15 ಸಾವಿರ, ದ್ವಿತೀಯ ₹ 10 ಸಾವಿರ ಹಾಗೂ ತೃತೀಯ ಬಹುಮಾನ ₹ 5 ಸಾವಿರ ಇರಲಿದೆ. ಜಿಲ್ಲಾಮಟ್ಟದಲ್ಲಿ ಪ್ರಥಮ ₹ 25 ಸಾವಿರ, ದ್ವಿತೀಯ ₹ 15 ಸಾವಿರ ಹಾಗೂ ತೃತೀಯ ಬಹುಮಾನ ₹ 10 ಸಾವಿರ ಇರಲಿದೆ. ರಾಜ್ಯಮಟ್ಟದಲ್ಲಿ ಪ್ರಥಮ ₹ 1 ಲಕ್ಷ, ದ್ವಿತೀಯ ₹ 50 ಸಾವಿರ ಹಾಗೂ ತೃತೀಯ ಬಹುಮಾನ ₹ 25 ಸಾವಿರ ಇರಲಿದೆ.
ಸಚಿವ ಎನ್.ಎಸ್.ಭೋಸರಾಜು ಅವರು ಈ ಸ್ಪರ್ಧೆಗಳಿಗೆ ಚಾಲನೆ ನೀಡಿದ ನಂತರ ಆಯಾ ಮಟ್ಟದಲ್ಲಿ ಈ ಎಲ್ಲ ಸ್ಪರ್ಧೆಗಳನ್ನೂ ಅ. 31ರ ಒಳಗೆ ಮುಗಿಸಬೇಕು. ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಸ್ಪರ್ಧೆಗಳ ಬಹುಮಾನಗಳನ್ನು ನ. 14ರಂದು ವಿತರಣೆಯಾಗಲಿದ್ದು, ರಾಜ್ಯಮಟ್ಟದ ವಿಜೇತರಿಗೆ ನ. 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬೈಕ್ ಜಾಥಾ ಇಂದು ಸೈಕಲ್ ಜಾಥಾ ನಾಳೆ
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ಸೆ. 15ರಂದು ಬೆಳಿಗ್ಗೆ 7.30ಕ್ಕೆ ಸೈಕಲ್ ಜಾಥ ನಡೆಯಲಿದೆ. ಸೆ. 14ರಂದು ಮಧ್ಯಾಹ್ನ 1 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಬೈಕ್ ಜಾಥಾಗೆ ಚಾಲನೆ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.