ADVERTISEMENT

ಕುಶಾಲನಗರ: ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ₹1.51 ಕೋಟಿ ಲಾಭ

ಶತಮಾನ ಪೂರೈಸಿದ ಸಂಘ; ಸದಸ್ಯರಿಗೆ ಶೇ 16ರಷ್ಟು ಲಾಭಾಂಶ

​ಪ್ರಜಾವಾಣಿ ವಾರ್ತೆ
Published 27 ಮೇ 2022, 5:34 IST
Last Updated 27 ಮೇ 2022, 5:34 IST
ಕುಶಾಲನಗರದಲ್ಲಿ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿದರು. ಆನಂದ್ ಕುಮಾರ್, ಲೋಕೇಶ್ ಇದ್ದಾರೆ
ಕುಶಾಲನಗರದಲ್ಲಿ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿದರು. ಆನಂದ್ ಕುಮಾರ್, ಲೋಕೇಶ್ ಇದ್ದಾರೆ   

ಕುಶಾಲನಗರ: ‘ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2021–22ನೇ ಸಾಲಿನಲ್ಲಿ ₹195.26 ಕೋಟಿ ವ್ಯವಹಾರ ನಡೆಸಿ ₹1.51 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 16ರಷ್ಟು ಲಾಭಾಂಶ ನೀಡಲು ತೀರ್ಮಾನಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹೇಳಿದರು.

‘ಸಂಘವು 1921ರಲ್ಲಿ ಮುಳ್ಳುಸೋಗೆ ಗ್ರಾಮದಲ್ಲಿ ಪ್ರಾರಂಭ ವಾಗಿದ್ದು, 2021ರ ಜೂನ್‌ಗೆ 100 ವರ್ಷಗಳನ್ನು ಪೂರೈಸಿದೆ. ಹೀಗಾಗಿ, ಗುಡ್ಡೆಹೊಸೂರಿನ ಸಂಘದ ಜಾಗದಲ್ಲಿ ಶತಮಾನೋತ್ಸವ ಭವನ ನಿರ್ಮಿಸಲಾಗುತ್ತದೆ. 1,200 ಆಸನ ಸಾಮರ್ಥ್ಯದ ಸಭಾ ಭವನ, ಅಡುಗೆ ಕೋಣೆ, ಊಟದ ಹಾಲ್ ನಿರ್ಮಿಸ ಲಾಗುತ್ತದೆ. ಆರೋಗ್ಯ ತಪಾಸಣಾ ಕೇಂದ್ರ, ಸಂಘದ ಶಾಖಾ ಕಚೇರಿ, ಕಾಫಿ ಕೆಫೆ, ಸೂಪರ್ ಮಾರ್ಕೆಟ್‌ ತೆರೆಯಲು ಉದ್ದೇಶಿಸಲಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಂಘವು 26 ವರ್ಷಗಳಿಂದ ಲಾಭದಲ್ಲಿ ಮುನ್ನಡೆಯುತ್ತಿದೆ. 3,406 ಸದಸ್ಯರನ್ನು ಹೊಂದಿದ್ದು, ಅವರಿಂದ ₹3.09 ಕೋಟಿಯನ್ನು ಸಂಗ್ರಹಿಸಿದೆ. ಮಾರ್ಚ್ ಅಂತ್ಯಕ್ಕೆ ಒಟ್ಟು ₹41.42 ಕೋಟಿಗಳಷ್ಟು ಠೇವಣಿಯನ್ನು ಸ್ವೀಕರಿಸಿದೆ. ನಿರಖು ಠೇವಣಿಗಳಿಗೆ ಶೇ 7.50ರಷ್ಟು ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಹಾಗೂ ಧಾರ್ಮಿಕ ಸಂಘ ಸಂಸ್ಥೆಗಳಿಗೆ ಶೇ 8ರಷ್ಟು ಬಡ್ಡಿ ನೀಡುತ್ತಿದ್ದೇವೆ’ ಎಂದರು.

ADVERTISEMENT

‘ಸಂಘದಲ್ಲಿ ಕ್ಷೇಮ ನಿಧಿ ₹2.85 ಕೋಟಿ, ಕಟ್ಟಡ ನಿಧಿ ₹2.44 ಕೋಟಿ, ಮರಣ ನಿಧಿ ₹24.27 ಲಕ್ಷ, ಮರಣೋತ್ತರ ಸಾಲ ಪರಿಹಾರ ನಿಧಿ ₹26.70 ಲಕ್ಷಗಳಷ್ಟಿದ್ದು, ಎಲ್ಲಾ ನಿಧಿಗಳನ್ನು ಸೇರಿಸಿ ₹7.26 ಕೋಟಿಗಳಷ್ಟು ಇದೆ. ಆರೋಗ್ಯ ನಿಧಿಯಿಂದ ಕೆಲವು ಸದಸ್ಯರಿಗೆ ₹1.27 ಲಕ್ಷಗಳಷ್ಟು ಧನಸಹಾಯ ನೀಡಲಾಗಿದೆ’ ಎಂದು ತಿಳಿಸಿದರು.

‘ಈ ಸಾಲಿನಲ್ಲಿ ₹44.80 ಕೋಟಿ ಸಾಲ ವಿತರಿಸಲಾಗಿದೆ. ಸಂಘದಲ್ಲಿರುವ 63 ಸ್ವಸಹಾಯ ಗುಂಪುಗಳಿಗೆ ₹44.80 ಲಕ್ಷ ಸಾಲ ನೀಡಲಾಗಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದ್ ಕುಮಾರ್, ನಿರ್ದೇಶಕರಾದ ಬಿ.ಎ.ಅಬ್ದುಲ್ ಖಾದರ್, ಪಿ.ಬಿ.ಯತೀಶ್, ಪಿ.ಕಾರ್ತೀಶನ್, ಎಚ್.ಎಂ.ಮಧುಸೂದನ್, ಡಿ.ವಿ.ರಾಜೇಶ್, ಮಧುಕುಮಾರ್, ಕವಿತಾ ಮೋಹನ್, ಕಾರ್ಯ ನಿರ್ವಹಣಾಧಿಕಾರಿ ಎಸ್.ಬಿ.ಲೋಕೇಶ್ ಇದ್ದರು.

ಸಂಘದ ವಾರ್ಷಿಕ ಸಭೆ ಮೇ 29ರಂದು ಬೆಳಿಗ್ಗೆ 11 ಗಂಟೆಗೆ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯಲಿದೆ.

–ಟಿ.ಆರ್. ಶರವಣಕುಮಾರ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.