ADVERTISEMENT

ನಿಷೇಧಿತ ಅವಧಿಯಲ್ಲಿ ಗುಂಪು ಸೇರುವಂತಿಲ್ಲ, ಮೆರವಣಿಗೆ, ವಿಜಯೋತ್ಸವ ನಿಷೇಧ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 12:29 IST
Last Updated 5 ಡಿಸೆಂಬರ್ 2019, 12:29 IST

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಡಿ.6ರಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆ ತನಕ ನಿಷೇಧಾಜ್ಞೆಯನ್ನು ಜಾರಿಗೊಳಿಸಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ಡಿಸೆಂಬರ್‌ 6ರಂದು ಬಾಬರಿ ಮಸೀದಿ ಧ್ವಂಸ ಪ್ರಕರಣ ನಡೆದಿತ್ತು. ಎರಡು ಕೋಮಿನ ಜನರು ಕರಾಳ ಹಾಗೂ ವಿಜಯೋತ್ಸವ ಆಚರಣೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಏನೇನು ಷರತ್ತು: ಸರ್ಕಾರಿ ಕಾರ್ಯಕ್ರಮ ಮತ್ತು ಪೂರ್ವ ಯೋಜಿತ ಮದುವೆ, ನಾಮಕರಣ, ಗೃಹಪ್ರವೇಶ ಕಾರ್ಯಕ್ರಮ, ವಾರದ ಸಂತೆ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ಮತ್ತು ದೇವಸ್ಥಾನ, ಪೂಜಾ ಮಂದಿರ, ಚರ್ಚ್, ಮಸೀದಿಗಳಲ್ಲಿ ನಡೆಯುವ ಪ್ರತಿನಿತ್ಯದ ಪ್ರಾರ್ಥನೆಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಸಭೆ, ಸಮಾರಂಭ ಮತ್ತು ಮೆರವಣಿಗೆ ನಿಷೇಧಿಸಲಾಗಿದೆ.

ADVERTISEMENT

ಎಲ್ಲ ಸಾರ್ವಜನಿಕ, ರಾಜಕೀಯ ಬಹಿರಂಗ ಸಭೆ, ಸಮಾರಂಭ, ಪ್ರಚೋದನಾಕಾರಿ ಹೇಳಿಕೆ, ಭಾಷಣ, ಮೆರವಣಿಗೆ, ಜಾಥಾ, ಧರಣಿ, ಮುಷ್ಕರ, ರಸ್ತೆ ತಡೆ ಹಾಗೂ ಮುತ್ತಿಗೆ ಸಂಪೂರ್ಣವಾಗಿ ನಿಷೇಧಿಸಿದೆ.

ವಿಜಯೋತ್ಸವ, ಪ್ರತಿಭಟನೆ ನಡೆಸುವುದು, ಪಟಾಕಿ ಸಿಡಿಸುವುದು, ಕಪ್ಪುಬಟ್ಟೆ ಧರಿಸಿ ಪ್ರತಿಭಟಿಸುವುದು ಮತ್ತು ಕಪ್ಪು ಅಥವಾ ಯಾವುದೇ ಪ್ರಚೋದನಾಕಾರಿ ಬಾವುಟ ಪ್ರದರ್ಶಿಸುವುದು, ಪ್ರಚೋದನಾತ್ಮಕ ಘೋಷಣೆ ಕೂಗುವುದು, ವಾಹನಗಳಲ್ಲಿ ಪ್ರಚೋದನಾತ್ಮಕ ಫಲಕ, ಬಾವುಟಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ. ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಕರಪತ್ರ, ಭಿತ್ತಿಪತ್ರ ಬಳಸುವುದು ಹಾಗೂ ಅಂಟಿಸುವುದು ಅಥವಾ ಹಂಚುವುದನ್ನು ನಿರ್ಬಂಧಿಸಲಾಗಿದೆ.

ನಿಷೇಧಿತ ಅವಧಿಯಲ್ಲಿ 5 ಮತ್ತು ಅದಕ್ಕಿಂತ ಮೇಲ್ಪಟ್ಟು ಜನರು ಗುಂಪು ಸೇರಬಾರದು. ಸರ್ಕಾರಿ ಕರ್ತವ್ಯ ನಿಮಿತ್ತ ಮತ್ತು ಬ್ಯಾಂಕ್, ಎ.ಟಿ.ಎಂ ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಸಿಬ್ಬಂದಿ ಹೊರತುಪಡಿಸಿ ಖಾಸಗಿ ವ್ಯಕ್ತಿಗಳು ಯಾವುದೇ ರೀತಿಯ ಆಯುಧ, ಮಾರಣಾಂತಿಕ ಆಯುಧ ಹೊಂದಿರುವುದು, ಪ್ರದರ್ಶಿಸುವುದು, ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.