ಮಡಿಕೇರಿ: ‘ದಾವಣಗೆರೆ ಮೂಲದ ಕಂಪನಿಯೊಂದು ತಾಲ್ಲೂಕಿನ ಕೇರಳ ಗಡಿಭಾಗ ಮುನ್ರೋಟ್‌ನಲ್ಲಿ ಖರೀದಿಸಿರುವ ಭೂಮಿಗೆ ಸಂಪರ್ಕ ಕಲ್ಪಿಸಲು ತಲಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ರಸ್ತೆ ನಿರ್ಮಿಸಲು ಅನುಮತಿ ಕೋರಿ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಅಧಿಕಾರಿಗಳು ಅನುಮತಿ ನೀಡಬಾರದು’ ಎಂದು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ಕೆ.ಎನ್.ಮಾದಪ್ಪ ಒತ್ತಾಯಿಸಿದರು.
‘ಸದ್ಯ, ಕೇರಳ ಮೂಲಕವೇ ರಾಜ್ಯದ ಭಾಗವಾದ ಮುನ್ರೋಟ್ ತಲುಪಬೇಕು. ಅದಕ್ಕಾಗಿ ಸುಮಾರು 80 ಕಿ.ಮೀಗೂ ಅಧಿಕ ದೂರ ಕ್ರಮಿಸಬೇಕು. ಆದರೆ, ತಲಕಾವೇರಿ ವನ್ಯಜೀವಿ ವಲಯದೊಳಗೆ ಕೇವಲ 25 ಕಿ.ಮೀ ದೂರವಷ್ಟೇ ಆಗುವುದರಿಂದ ಕಂಪನಿಯು ರಸ್ತೆ ನಿರ್ಮಿಸಲು ಅನುಮತಿ ಕೋರಿದೆ. ರಸ್ತೆ ನಿರ್ಮಿಸಿದರೆ ಅಮೂಲ್ಯ ಜೀವವೈವಿಧ್ಯಕ್ಕೆ ತೊಂದರೆಯಾಗುತ್ತದೆ. ಮಾನವ–ವನ್ಯಜೀವಿ ಸಂಘರ್ಷವೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
‘ತಲಕಾವೇರಿ ಭಾಗದಿಂದ ಅಲ್ಲಿಗೆ ರಸ್ತೆ ಸಂಪರ್ಕ ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಜಾಗ ಖರೀದಿಸಿ, ಈಗ ಸಂಚರಿಸಲು ಜಾಗವಿಲ್ಲವೆಂದು ಕಾಡಿನೊಳಗೆ ರಸ್ತೆ ನಿರ್ಮಿಸಲು ಅನುಮತಿ ಕೇಳಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
‘ಭೂಕುಸಿತದ ಸಂಭಾವ್ಯ ಪ್ರದೇಶಗಳಲ್ಲಿ ಒಂದಾಗಿರುವ ಇಲ್ಲಿ ರಸ್ತೆ ನಿರ್ಮಾಣವಾದರೆ ಮತ್ತಷ್ಟು ಭೂಕುಸಿತವಾಗುವ ಸಾಧ್ಯತೆಗಳಿವೆ. ಇದು ಯುನೆಸ್ಕೊ ವಿಶ್ವ ಪಾರಂಪರಿಕ ತಾಣ, ತಲಕಾವೇರಿ ವನ್ಯಜೀವಿಧಾಮ, ಆನೆ ಕಾರಿಡಾರ್ ಇದೆ. ಆಕ್ಷೇಪಣೆಗಳನ್ನು ಪರಿಗಣಿಸದೇ ಅನುಮತಿ ನೀಡಿದರೆ ಕಾನೂನು ಹೋರಾಟ ನಡೆಸಲಾಗುವುದು’ ಎಂದೂ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.