
ಮಡಿಕೇರಿ: ‘ನ್ಯಾಯಾಂಗ ಮತ್ತು ಪತ್ರಿಕಾಂಗವು ಸಂವಿಧಾನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂವಿಧಾನ ಉಳಿದರೆ ಮಾತ್ರ ಸ್ವಾತಂತ್ರ್ಯ ಉಳಿಯುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕು’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ‘ಸಂವಿಧಾನ ಮತ್ತು ಪತ್ರಿಕೋದ್ಯಮ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
‘ಈಗ ಕೃತಕ ಬುದ್ಧಿಮತ್ತೆ (ಎಐ) ಬಂದಿದೆ. ಎಲ್ಲವನ್ನೂ ಅದು ಮಾಡಲಿದೆ ಎಂದು ಹೇಳಲಿಕ್ಕಾಗದು. ಒಬ್ಬ ವ್ಯಕ್ತಿಯ ಸೃಜನಾತ್ಮಕ ಬರಹದ ಮಟ್ಟಕ್ಕೆ ಎಐ ತಲುಪಲು ಸಾಧ್ಯವಾಗದು ಎಂಬುದು ನನ್ನ ಭಾವನೆ. ಅದು ಮುಂದೆ ಎಷ್ಟು ಪರಿಣಾಮಕಾರಿಯಾಗಿ ಬರುತ್ತದೆ ಎಂಬುದು ಗೊತ್ತಿಲ್ಲ. ಆದರೆ, ನಾವಿಲ್ಲದೇ ಎಐ ಇರಲು ಸಾಧ್ಯವಿಲ್ಲ. ಅದನ್ನು ಸದ್ಭಳಕೆ ಮಾಡಿಕೊಂಡು ನಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ.ಪೊನ್ನಪ್ಪ, ‘ಸಂವಿಧಾನ ಮತ್ತು ಪತ್ರಿಕೋದ್ಯಮ ಕುರಿತಾದ ಕಾರ್ಯಾಗಾರಗಳು ಇಂದಿನ ಅಗತ್ಯ’ ಎಂದು ಪ್ರತಿಪಾದಿಸಿದ ಅವರು, ‘ಮುಂದಿನ ದಿನಗಳಲ್ಲಿ ಇಂತಹ ಕಾರ್ಯಾಗಾರಗಳು ತಾಲ್ಲೂಕುಗಳಲ್ಲಿ ಹಾಗೂ ಶಾಲಾ, ಕಾಲೇಜುಗಳಲ್ಲಿ ನಡೆಯಲಿ’ ಎಂದು ಹೇಳಿದರು.
ವಿವಿಧ ಕಾಯ್ದೆಗಳ ಕುರಿತಾದ ವಿವೇಚನೆ ಪತ್ರಕರ್ತರಿಗೆ ಇರಬೇಕು. ಸ್ವಾತಂತ್ರ್ಯದ ಜೊತೆಜೊತೆಗೆ ಉತ್ತರದಾಯಿತ್ವವೂ ಇದೆ ಎಂಬ ಸಂವಿಧಾನದ ಪಾಠವನ್ನು ಪತ್ರಕರ್ತರು ಮರೆಯಬಾರದು ಎಂದು ತಿಳಿಸಿದರು.
ವಿಡಿಯೊ ಮೂಲಕ ಮಾತನಾಡಿದ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ‘ಕರ್ನಾಟಕದಲ್ಲಿ ಇರುವಷ್ಟು ಮಾಧ್ಯಮ ಸ್ವಾತಂತ್ರ್ಯ ಬೇರೆ ರಾಜ್ಯಗಳಲ್ಲಿ ಇಲ್ಲ. ಇತರ ರಾಜ್ಯಗಳಿಗಿಂತ ಹೆಚ್ಚು ಸ್ವಾತಂತ್ರ್ಯ ನಮ್ಮ ರಾಜ್ಯದಲ್ಲಿದೆ’ ಎಂದರು.
ಇಂದಿನ ದಿನಗಳಲ್ಲಿ ಹುಸಿ ಸುದ್ದಿಯ ವಿರುದ್ಧ ಸಮರ ಸಾರಬೇಕಿದೆ. ಅದಕ್ಕಾಗಿಯೇ ಇಂತಹ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
‘ಫ್ಯಾಕ್ಟ್ ಚೆಕ್’ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿನ ಭಾಷೆ ಕುರಿತು ಹಿರಿಯ ಪತ್ರಕರ್ತ ಸಮೀವುಲ್ಲಾ, ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕಿ ಎಸ್.ರಶ್ಮಿ, ‘ನ್ಯೂಸ್ ರೂಂನಲ್ಲಿ ಎಐ’ ಕುರಿತು ದೆಹಲಿ ಐಐಟಿ ಪದವೀಧರ ರಾಹುಲ್ ಗುಂಡಾಲ ಮಾತನಾಡಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಸವಿತಾ ರೈ, ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಾಚರಣಿಯಂಡ ಅನುಕಾರ್ಯಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ಅಕಾಡೆಮಿ ಕಾರ್ಯದರ್ಶಿ ಎನ್.ಎಸ್.ಮಹೇಶ್, ಅಕಾಡೆಮಿ ಸದಸ್ಯೆ ಮಮತಾ, ಹಿರಿಯ ಪತ್ರಕರ್ತ ಸಿ.ಎಸ್.ಬೋಪಯ್ಯ ಭಾಗವಹಿಸಿದ್ದರು.
- ವಿಮರ್ಶೆ ಸಕಾರಾತ್ಮಕವಾಗಿರಲಿ; ಡಾ.ಮಂತರ್‌ಗೌಡ ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ರಾಜಕಾರಣಿಗಳು ತಪ್ಪು ಮಾಡಿದಾಗ ಬರೆಯಬೇಡಿ ಎಂದು ಹೇಳುವುದಿಲ್ಲ. ಆದರೆ ವಿಮರ್ಶೆ ಸಕಾರಾತ್ಮಕವಾಗಿರಲಿ’ ಎಂದು ಹೇಳಿದರು. ರಾಜಕಾರಣಿಗಳು ತಲುಪದ ಕಡೆ ಪತ್ರಕರ್ತರು ತಲುಪುತ್ತಾರೆ. ಅವರು ಅತೀ ಮುಖ್ಯ. ಶಾಸಕಾಂಗ ಕಾರ್ಯಾಂಗ ಹಾಗೂ ನ್ಯಾಯಾಂಗದಷ್ಟೇ ಪತ್ರಿಕಾಂಗವೂ ಮುಖ್ಯ. ಆದರೆ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಇರಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.