ADVERTISEMENT

ಗ್ರಾಹಕರಿಗೆ ಕಿರುಕುಳ: ಅಧಿಕಾರಿಗಳ ವಿರುದ್ಧ ಆಕ್ರೋಶ

ಪಡಿತರ ವ್ಯವಸ್ಥೆ ಅವೈಜ್ಞಾನಿಕ: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 13:14 IST
Last Updated 29 ಜನವರಿ 2020, 13:14 IST
ಪಡಿತರ ವ್ಯವಸ್ಥೆಯಡಿ ಇ-ಕೆವೈಸಿ ಯೋಜನೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಆರೋಪಿಸಿ, ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಭಾರತ್ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ವತಿಯಿಂದ ಪ್ರತಿಭಟನೆ ನಡೆಯಿತು
ಪಡಿತರ ವ್ಯವಸ್ಥೆಯಡಿ ಇ-ಕೆವೈಸಿ ಯೋಜನೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಆರೋಪಿಸಿ, ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಭಾರತ್ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ವತಿಯಿಂದ ಪ್ರತಿಭಟನೆ ನಡೆಯಿತು   

ಮಡಿಕೇರಿ: ಪಡಿತರ ವ್ಯವಸ್ಥೆಯಡಿ ಇ-ಕೆವೈಸಿ ಯೋಜನೆಯು ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಆರೋಪಿಸಿ, ಭಾರತ್ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬುಧವಾರ ಎದುರು ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಡಳಿತ ಭವನದ ಎದುರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ‘ಪಡಿತರ ವ್ಯವಸ್ಥೆಯನ್ನು ಸರಿ ಮಾಡುವ ನೆಪದಲ್ಲಿ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿದೆ’ ಎಂದು ಆರೋಪಿಸಿದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಘೋಷಣೆ ಕೂಗಿದರು.

ADVERTISEMENT

ಸರ್ವರ್ ಸಮಸ್ಯೆಯಿಂದ ಗ್ರಾಹಕರು ಪಡಿತರ ಸಾಮಗ್ರಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡರು.

ಸಂಚಾಲಕ ಈ.ರಾ.ದುರ್ಗಾ ಪ್ರಸಾದ್ ಮಾತನಾಡಿ, ‘ಪಡಿತರ ವ್ಯವಸ್ಥೆಯಲ್ಲಿರುವ ನಕಲಿ ಕಾರ್ಡ್‌ಗಳನ್ನು ಪತ್ತೆಹಚ್ಚುವ ನೆಪದಲ್ಲಿ ಸರ್ಕಾರದಿಂದ ಕಿರುಕುಳ ಆಗುತ್ತಿದೆ. ಅನರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ದೊರಕುತ್ತಿದೆ. ಇದಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಕಾರಣರಾಗಿದ್ದಾರೆ’ ಎಂದು ದೂರಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಮಾತ್ರ ನೀಡುತ್ತಿದ್ದು, ತೂಕದಲ್ಲಿ ಕೂಡ ವಂಚನೆಯಾಗುತ್ತಿದೆ. ಸರ್ಕಾರ ಪಡಿತರ ಚೀಟಿಗಳನ್ನು ವಿತರಿಸುವ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಿದ್ದು, ನಕಲಿ ಕಾರ್ಡ್ ಸೃಷ್ಟಿಗೆಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇ-ಕೆವೈಸಿ ಯೋಜನೆ ಪುನರಾರಂಭ ಮಾಡಲಾಗಿದೆ. 3 ಜಿಲ್ಲೆಗೆ ಒಂದು ಸರ್ವರ್ ಸೇವೆಯನ್ನು ಕಲ್ಪಿಸಲಾಗಿದೆ. ಇದರಿಂದ ನೆಟ್‌ವರ್ಕ್ ಸಮಸ್ಯೆಯಾಗಿ ಪಡಿತರ ಪೂರೈಕೆ ಕೇಂದ್ರಗಳಲ್ಲಿ ಬೆರಳಚ್ಚು ನೀಡಲಾಗುತ್ತಿಲ್ಲ. ಕಾರ್ಮಿಕ ವರ್ಗದ ಬೆರಳಚ್ಚು ಆನ್‌ಲೈನ್‌ನಲ್ಲಿ ತೆಗೆದುಕೊಳ್ಳುತ್ತಿಲ್ಲ ಎಂದು ನೋವು ತೋಡಿಕೊಂಡರು.

ಇ-ಕೆವೈಸಿ ನಡೆಸಲು ಮೊದಲು ಸರ್ವರ್ ವ್ಯವಸ್ಥೆ ಸರಿಪಡಿಸಬೇಕು. ಇಡೀ ವ್ಯವಸ್ಥೆ ಸರಳೀಕರಣಗೊಳ್ಳಬೇಕು. ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಜಿಲ್ಲೆಯ ಜನರಿಗೆ ನೀಡುವ ಪಡಿತರ ಪ್ರಮಾಣ ಹೆಚ್ಚಿಸಬೇಕು ಎಂದೂ ಅವರು ಒತ್ತಾಯಿಸಿದರು.

ಮುಖಂಡರಾದ ಎ.ಮಹದೇವ್, ಜೋಸ್, ಗಣೇಶ್, ಶಿವಪ್ಪ, ಸಾಬು, ಮಹೇಶ್, ಪಿ.ಆರ್.ಭರತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.